*ವಿಸರ್ಜನಾ ಮೆರವಣಿಗೆ ವೇಳೆ ಮೂವತ್ತಕ್ಕೂ ಹೆಚ್ಚು ಡ್ರೋನ್ ಕಣ್ಗಾವಲು*
ಹುಬ್ಬಳ್ಳಿ : ದಿ.14ರಿಂದ 25ರವರೆಗೆ ಗಣೇಶೋತ್ಸವವನ್ನು ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಅತ್ಯಂತ ವೈಭವದಿಂದ ಆಚರಿಸಲಾಗುತ್ತಿದ್ದು, ಶಾಂತಿಯುತವಾಗಿ, ಸುರಕ್ಷಿತವಾಗಿ ಹಾಗೂ ಸಂಭ್ರಮದಿಂದ ನಡೆಯುವಂತೆ ಮಾಡಲು ಹುಬ್ಬಳ್ಳಿ-ಧಾರವಾಡ ನಗರ ಪೊಲೀಸರು ವ್ಯಾಪಕ ಭದ್ರತಾ, ಸಂಚಾರ ಹಾಗೂ ಸಾರ್ವಜನಿಕ ಸುರಕ್ಷತಾ ವ್ಯವಸ್ಥೆಗಳನ್ನು ಕೈಗೊಂಡಿದ್ದಾರೆ.

ಗಣೇಶೋತ್ಸವದ ಬಂದೋಬಸ್ತ್ ಕರ್ತವ್ಯಕ್ಕಾಗಿ ಪೊಲೀಸ್ ಕಾನ್ಸ್ಟೇಬಲ್ನಿಂದ ಪೊಲೀಸ್ ಆಯುಕ್ತರವರೆಗೆ ಅವಳಿ ನಗರ ಪೊಲೀಸ್ ಘಟಕದ ಸಂಪೂರ್ಣ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಇದರ ಜೊತೆಗೆ ರಾಜ್ಯದ ಇತರ ಭಾಗಗಳಿಂದಲೂ ಪೊಲೀಸ್ ಅಧಿಕಾರಿ ಸಿಬ್ಬಂದಿಯನ್ನು ಬಂದೋಬಸ್ತ್ ನಿಯೋಜಿಸಲಾಗಿದೆ.
ಬಂದೋಬಸ್ತ್ ಗಾಗಿ ಹೆಚ್ಚುವರಿಯಾಗಿ 500 ಗೃಹರಕ್ಷಕ ದಳದ ಸಿಬ್ಬಂದಿ , 8 ಸಿಎಆರ್ ತುಕಡಿಗಳು, 16 ಕೆಎಸ್ಆರ್ಪಿ ತುಕಡಿಗಳು ಮತ್ತು ಕ್ಷಿಪ್ರ ಕಾರ್ಯಾಚರಣೆ ಪಡೆಯ ಒಂದು ಕಂಪನಿ ನಿಯೋಜನೆಗೊಳ್ಳಲಿವೆ ಎಂದು ಆಯುಕ್ತರಾದ ಭೂಷಣ್ ಬೋರಸೆ ತಿಳಿಸಿದ್ದಾರೆ.
ಮಹಾನಗರ ಪಾಲಿಕೆಯಿಂದ ಅಳವಡಿಸಲಾದ ಸಿಸಿಟಿವಿ ಕ್ಯಾಮರಾಗಳು ಹಾಗೂ ಸಂಚಾರ ಪೊಲೀಸರು ಬಳಸುತ್ತಿರುವ ಸಿಸಿಟಿವಿ ಕ್ಯಾಮರಾಗಳನ್ನು ಪ್ರಮುಖ ಮತ್ತು ಸೂಕ್ಷ್ಮ ಸ್ಥಳಗಳ ಮೇಲೆ ನಿಗಾ ವಹಿಸಿದ್ದು, ಗಣೇಶೋತ್ಸವ ಹಾಗೂ ಮೆರವಣಿಗೆಗಳ ಸಂದರ್ಭದಲ್ಲಿ ವೈಮಾನಿಕ ಕಣ್ಗಾವಲು ಇಡಲು 30ಕ್ಕೂ ಹೆಚ್ಚು ಡ್ರೋನ್ ಗಳನ್ನು ಸಹ ನಿಯೋಜಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಸಾಮಾಜಿಕ ಜಾಲತಾಣ ಘಟಕವು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಸುಳ್ಳು ಮಾಹಿತಿ, ವದಂತಿಗಳು ಹಾಗೂ ಸಾರ್ವಜನಿಕ ಶಾಂತಿ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ ಉಂಟುಮಾಡಬಹುದಾದ ಆಕ್ಷೇಪಾರ್ಹ ವಿಷಯಗಳ ಮೇಲೆ ನಿರಂತರ ನಿಗಾ ವಹಿಸಲಿದೆ.
ಸಾರ್ವಜನಿಕರು ಮತ್ತು ಪ್ರವಾಸಿಗರಿಗೆ ಮಾಹಿತಿ ಹಾಗೂ ಸಂಚಾರ ವ್ಯವಸ್ಥೆಗಣೇಶೋತ್ಸವದ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ನಗರಕ್ಕೆ ಆಗಮಿಸುವ ಸಾರ್ವಜನಿಕರು ಹಾಗೂ ಹೊರಗಿನ ಪ್ರವಾಸಿಗರ ಅನುಕೂಲಕ್ಕಾಗಿ ಗಣೇಶ ಮಂಟಪಗಳ ಸ್ಥಳಗಳು ಹಾಗೂ ನಿಗದಿತ ವಾಹನ ನಿಲುಗಡೆ ಪುದೇಶಗಳ ಮಾಹಿತಿಯನ್ನು ಒದಗಿಸುವ ವಿಶೇಷ ವೆಬ್ಸೈಟ್ ಸಿದ್ಧಪಡಿಸಲಾಗಿದೆ.
ಗಣೇಶ ಮೆರವಣಿಗೆಗಳು ಹಾಗೂ ಸಾಮಾನ್ಯ ಸಂಚಾರ ಸುಗಮವಾಗಿ ನಡೆಯುವಂತೆ ಸಾರ್ವಜನಿಕ ರಸ್ತೆಗಳಲ್ಲಿ ದೀರ್ಘಕಾಲದಿಂದ ನಿಲ್ಲಿಸಿರುವ/ಕೈಬಿಟ್ಟಿರುವ ವಾಹನಗಳನ್ನು ತೆರವುಗೊಳಿಸಲು ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ.
ತಮ್ಮ ಪ್ರದೇಶಗಳಲ್ಲಿ ಇಂತಹ ವಾಹನಗಳು ಕಂಡುಬಂದಲ್ಲಿ ಸಾರ್ವಜನಿಕರು ಅವುಗಳ ಛಾಯಾಚಿತ್ರ ಹಾಗೂ ಸ್ಥಳದ ಮಾಹಿತಿಯನ್ನು ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ವಾಟ್ಸಾಪ್ ಸಂಖ್ಯೆ 9480802002ಕ್ಕೆ ಅಥವಾ ನಗರ ಪೊಲೀಸರ ಸಾಮಾಜಿಕ ಜಾಲತಾಣ ಖಾತೆಗಳಿಗೆ ಕಳುಹಿಸುವ ಮೂಲಕ ಸಹಕರಿಸಲು ಕೋರಲಾಗಿದೆ.
ಎಲ್ಲಾ ಗಣೇಶ ಮಂಡಳಿಗಳು ಉತ್ಸವದ ಸಂದರ್ಭದಲ್ಲಿ ಅಗತ್ಯ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಬೇಕು. ವಿಶೇಷವಾಗಿ ವಿದ್ಯುತ್ ಕೇಬಲಿಂಗ್ ಹಾಗೂ ಅಲಂಕಾರಿಕ ವಿದ್ಯುತ್ ದೀಪಗಳ ಅಳವಡಿಕೆಯ ಸಂದರ್ಭದಲ್ಲಿ ವಿದ್ಯುತ್ ಅವಘಡಗಳು ಸಂಭವಿಸದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು. ರಾತ್ರಿ ವೇಳೆಯಲ್ಲಿ ಮಂಟಪದ ಭದ್ರತೆ ಮತ್ತು ಸುರಕ್ಷತೆಗಾಗಿ ಸಾಕಷ್ಟು ಸಂಖ್ಯೆಯ ಸ್ವಯಂಸೇವಕರು ಮಂಟಪದಲ್ಲಿ ಉಳಿದುಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಶಬ್ದ ಮಾಲಿನ್ಯ ಮತ್ತು ಸಾರ್ವಜನಿಕ ಸುರಕ್ಷತೆಯ ಬಗ್ಗೆ ಸಹ ಎಲ್ಲಾ ಮಂಡಳಿಗಳಿಗೆ ಸೂಚನೆ ನೀಡಲಾಗಿದೆ.

ಗಣೇಶೋತ್ಸವದ ಸಂದರ್ಭದಲ್ಲಿ ಬಳಸುವ ಯಾವುದೇ ಸಂಗೀತ ಅಥವಾ ಧ್ವನಿವರ್ಧಕ ವ್ಯವಸ್ಥೆಯ ಶಬ್ದದ ಮಟ್ಟವನ್ನು ಅಳೆಯಲು ಪೊಲೀಸರು “Sound Meter: SPL and dB Meter” ಮೊಬೈಲ್ ಆಪ್ ಅನ್ನು ಬಳಸಲಿದ್ದಾರೆ. ಈ ಆ್ಯಪ್ನ ಮಾಪನವನ್ನು ಮಾಲಿನ್ಯ ನಿಯಂತ್ರಣ ಮಂಡಳಿಯು ಬಳಸುವ ಶಬ್ದಮಾಪನ ಸಾಧನದೊಂದಿಗೆ ಹೋಲಿಕೆ ಮಾಡಿ ಕ್ಯಾಲಿಬ್ರೇಟ್ ಮಾಡಲಾಗಿದೆ.
ಡಿಜೆ/ಧ್ವನಿವರ್ಧಕ ವ್ಯವಸ್ಥೆಗಳ ಬಳಕೆಯಿಂದ ಉಂಟಾಗುವ ನಿಯಮ ಉಲ್ಲಂಘನೆಗಳಿಗೆ ಡಿಜೆ ಆಪರೇಟರ್ ಹಾಗೂ ಡಿಜೆ ಮಾಲೀಕರನ್ನು ನೇರವಾಗಿ ಹೊಣೆಗಾರರನ್ನಾಗಿ ಮಾಡಲಾಗುವುದು ಮತ್ತು ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು.
ಹುಬ್ಬಳ್ಳಿ-ಧಾರವಾಡ ನಗರ ಪೊಲೀಸರು ಎಲ್ಲಾ ಗಣೇಶ ಮಂಡಳಿಗಳು, ಆಯೋಜಕರು, ಸ್ವಯಂಸೇವಕರು ಹಾಗೂ ಸಾರ್ವಜನಿಕರು ಪೊಲೀಸ್ ಮತ್ತು ನಾಗರಿಕ ಆಡಳಿತದೊಂದಿಗೆ ಸಹಕರಿಸಿ ಗಣೇಶೋತ್ಸವವನ್ನು ಭಕ್ತಿ, ಶಿಸ್ತು, ಸುರಕ್ಷತೆ ಮತ್ತು ಜವಾಬ್ದಾರಿಯೊಂದಿಗೆ ಆಚರಿಸುವಂತೆ ಆಯುಕ್ತರು ಮನವಿ ಮಾಡಿದ್ದಾರೆ.
*ಕಿಡಿಗೇಡಿಗಳಿಗಳ ಮೇಲೆ ಪ್ರಕರಣ*
ನಿನ್ನೆ ಶನಿವಾರ ರಾತ್ರಿ 9:30 ಗಂಟೆಗೆ ಹುಬ್ಬಳ್ಳಿಯ ಮರಾಠ ಗಲ್ಲಿಯಿಂದ ಸಿಬಿಟಿ ಕಡೆಗೆ ಹೋಗುವ ರಸ್ತೆಯ ಬಳಿ ಮೇದಾರ್ ಓಣಿಯ ಗಣಪತಿ ಮತ್ತು ಕಲಾಲ್ ಓಣಿಯ ಗಣಪತಿ ಮೆರವಣಿಗೆಗಳು ಮುಖಾಮುಖಿಯಾದವು.
ಆ ಸಮಯದಲ್ಲಿ ಕಲಾಲ್ ಓಣಿಯ ಗಣಪತಿ ಡಿಜೆ ಮುಂದೆ ಕೆಲವು ಯುವಕರು ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾಗ ಅವರನ್ನು 30 ಸೆಕೆಂಡ್ಗಳಿಗಿಂತ ಕಡಿಮೆ ಅವಧಿಯಲ್ಲಿ ಕನಿಷ್ಠ ಬಲಪ್ರಯೋಗ ಮಾಡಿ ಅಲ್ಲಿಂದ ಚದುರಿಸಲಾಗಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ. ಘಟನೆಗೆ ಕಾರಣರಾದ ಅಪರಿಚಿತ ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಆಯುಕ್ತರ ಪ್ರಕಟಣೆ ತಿಳಿಸಿದೆ.



