ಧಾರವಾಡ ಜಿಲ್ಲೆಯಿಂದ ಯಾರಿಗೆ ತೀವ್ರ ಕುತೂಹಲ
ಹುಬ್ಬಳ್ಳಿ : ಮುಖ್ಯಮಂತ್ರಿ ಸ್ಥಾನಕ್ಕೆ ಭಾವನಾತ್ಮಕವಾಗಿ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದು ಇನ್ನು ೨-೩ ದಿನಗಳಲ್ಲಿ ಹೊಸ ಸರ್ಕಾರ ಅಸ್ಥಿತ್ವಕ್ಕೆ ಬರುವುದು ಖಚಿತವಾಗಿದ್ದು ಮಂತ್ರಿಮಂಡಳಕ್ಕೆ ಯಾರ್ಯಾರು ಸೇರ್ಪಡೆಯಾಗುತ್ತಾರೆಂಬ ಜತೆಗೆ ಧಾರವಾಡ ಜಿಲ್ಲೆಯಿಂದ ಯಾರಿಗೆ ಎಂಬ ಲೆಕ್ಕಾಚಾರ ಸಹ ಪ್ರಾರಂಭವಾಗಿದೆ.

ಹಾಲಿ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ ಮುಖ್ಯಮಂತ್ರಿಯಾಗುವುದು ಗ್ಯಾರಂಟಿಯಾಗಿದ್ದು ನಾಲ್ವರು ಉಪಮುಖ್ಯಮಂತ್ರಿಗಳು ಇರಲಿದ್ದಾರೆಂದು ಹೇಳಲಾಗುತ್ತಿದೆ.
ಹಾಲಿ ಸಂಪುಟದಲ್ಲಿನ ಅರ್ಧದಷ್ಟು ಜನ ಸಚಿವರು ಮಾಜಿಗಳಾಗುವುದು ಖಚಿತವಾಗಿದ್ದ ಸಿದ್ದರಾಮಯ್ಯ ಹೇಳಿದ ಹದಿನೈದು ಜನರಿಗೆ ಮಂತ್ರಿ ಪಟ್ಟ ನೀಡುವ ಬಗ್ಗೆ ಹೈಕಮಾಂಡ ಖಚಿತ ಭರವಸೆ ನೀಡಿದೆ ಎನ್ನಲಾಗಿದೆ.
ಪ್ರಸಕ್ತ ಪರಿಸ್ಥಿತಿಯಲ್ಲಿ ಹಾಲಿ ಧಾರವಾಡ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಅಲ್ಲದೆ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿರುವ ಸಂತೋಷ ಲಾಡ್ ಮುಂದಿನ ಸಂಪುಟದಲ್ಲೂ ಮತ್ತೆ ಮಂತ್ರಿಯಾಗುವ ಸಾಧ್ಯತೆಗಳು ಹೆಚ್ಚಾಗಿದೆ. ಅವರಿಗೆ ದಕ್ಕಿದಲ್ಲಿ ಇನ್ನೊಬ್ಬರಿಗೆ ಸಿಗುವ ಸಾಧ್ಯತೆಗಳು ಕಡಿಮೆ ಎಂಬ ಮಾತೂ ಕೇಳಿ ಬರುತ್ತಿದೆ.
ಜಿಲ್ಲೆಯಲ್ಲಿ ನಾಲ್ಕು ಕಾಂಗ್ರೆಸ್ ಶಾಸಕರು ಇದ್ದು ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿಯವರ ಸದಸ್ಯತ್ವ ರದ್ದಾಗಿದ್ದು, ಹಿರಿತನದ ವಿಷಯಕ್ಕೆ ಬಂದರೆ ಮೂರು ಬಾರಿ ಆಯ್ಕೆಯಾಗಿರುವ ಕೊಳಚೆ ನಿರ್ಮೂಲನಾ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಅವರ ಹೆಸರೂ ಮುಂಚೂಣಿಯಲ್ಲಿ ಪರಿಗಣನೆಗೆ ಬರಬಹುದಾಗಿದೆ. ಆದರೆ ಪರಿಶಿಷ್ಠ ಕೋಟಾದಲ್ಲಿ ಹೊಸ ಮುಖಗಳಿಗೆ ಮಣೆ ಹಾಕುತ್ತಾರೆಯಯೊ ಇಲ್ಲವೇ ಹೊಸಬರಿಗೆ ಅವಕಾಶ ನೀಡುತ್ತಾರೋ ಕಾದು ನೋಡಬೇಕಾಗಿದೆ. ನವಲಗುಂದದ ಕ್ರೀಯಾಶೀಲ ಶಾಸಕರಾಗಿರುವ ಎನ್.ಎಚ್. ಕೋನರಡ್ಡಿಯವರಿಗೆ ಅದೃಷ್ಟ ತೆರೆಯುವುದೋ ಎನ್ನುವ
ಮಾತು ಕೇಳಿ ಬಂದಿದೆ.

ಅಲ್ಪಸಂಖ್ಯಾತರ ಖೋಟಾ ಮತ್ತು ಪರಿಷತ್ ಕೋಟಾದಲ್ಲಿ ಹುಬ್ಬಳ್ಳಿಯಲ್ಲೇ ಮನೆ ಮಾಡಿರುವ ಅವಿಭಾಜ್ಯ ಧಾರವಾಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ಚುನಾಯಿತರಾಗಿರುವ ಹಾಲಿ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ ಅವರಿಗೆ ಮಂತ್ರಿ ಸ್ಥಾನ ಪಕ್ಕಾ ಎನ್ನಲಾಗುತ್ತಿದೆ. ಯಾವ ಬಣದಲ್ಲೂ ಗುರುತಿಸಿಕೊಳ್ಳದೇ ಹೈಕಮಾಂಡ ಕ್ಯಾಂಡಿಡೇಟ್ ಆಗಿರುವುದು ಸಲೀಮ್ ಅವರಿಗೆ ಪ್ಲಸ್ ಪಾಯಿಂಟಾಗಿದೆ.
ಗದಗದಿಂದ ಹಾಲಿ ಸಚಿವ ಎಚ್.ಕೆ.ಪಾಟೀಲರೇ ಮುಂದುವರಿಯುವ ಸಾಧ್ಯತೆಗಳಿದ್ದು,
ಡಿ.ಕೆ.ಶಿವಕುಮಾರ ಬಣದಲ್ಲಿ ಗುರುತಿಸಿಕೊಂಡಿರುವ ಹುಬ್ಬಳ್ಳಿ ಮೂಲದ ಹಾನಗಲ್ ಶಾಸಕ ಶ್ರೀನಿವಾಸ್ ಮಾನೆಯವರಿಗೆ ಈ ಬಾರಿ ಹಾವೇರಿ ಜಿಲ್ಲೆಯಿಂದ ಮಂತ್ರಿಗಿರಿ ದಕ್ಕುವ ಸಾಧ್ಯತೆಗಳಿವೆ. ವಿಧಾನಸಭಾ ಸ್ಪೀಕರ ಯು.ಟಿ.ಖಾದರ ಅವರಿಗೂ ಸಚಿವ ಸ್ಥಾನ ಪಕ್ಕಾ ಎನ್ನಲಾಗುತ್ತಿದೆ.



