*ರಚನಾತ್ಮಕ ಕಾರ್ಯಗಳ ಮೂಲಕ ಭರವಸೆಯ ಬೆಳಕು*
*ಯಶಸ್ವಿ ಆಡಳಿತಕ್ಕೆ ಸಾಥ್ ನೀಡಿದ ಉಪ ಮೇಯರ್ ಸಂತೋಷ ಚವ್ಹಾಣ*
ಹುಬ್ಬಳ್ಳಿ : ಕಳೆದ ವರ್ಷ ಜೂನ್ 30ರಂದು ರಾಜ್ಯದ ಎರಡನೆ ದೊಡ್ಡ ಮಹಾನಗರಪಾಲಿಕೆ ಹಣೆ ಪಟ್ಟಿ ಹಚ್ಚಿಕೊಂಡ ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯ ಪ್ರಥಮ ಪ್ರಜೆಯಾಗಿ ಆಯ್ಕೆಗೊಂಡ ಧಾರವಾಡದ ಜ್ಯೋತಿ ಪಾಟೀಲ ಒಂದು ವರ್ಷದ ಅವಧಿಯಲ್ಲಿ ಹುದ್ದೆಗೂ ಘನತೆ ತಂದು ಅನೇಕ ರಚನಾತ್ಮಕ ಕಾರ್ಯಗಳ ಮೂಲಕ ಭರವಸೆ ಮೂಡಿಸಿ ಇಂದು ತಮ್ಮ ಅವಧಿಯ ಅಂತಿಮ ಸರ್ವ ಸದಸ್ಯರ ಸಭೆ ಪೂರೈಸಿದರು.

ಜುಲೈ 4ರಂದು ನೂತನ ಮೇಯರ್ ಆಯ್ಕೆಗೆ ದಿನಾಂಕ ನಿಗದಿಯಾಗಿದ್ದು, ಇಂದು ಅಂತಿಮ ಸಭೆಯಲ್ಲಿ ತಮ್ಮ ಸಾಧನೆಯ ಅಂಕಿ ಅಂಶ ಬಿಚ್ಚಿಟ್ಟರಲ್ಲದೇ “ಪಾಲಿಕೆ ನಡೆ, ಮಹಾಜನತೆಯ ಕಡೆ” ಎಂಬ ವಾಕ್ಯದೊಂದಿಗೆ ನಿಗದಿತ ಕಾಲಾವಧಿಯಲ್ಲಿ ತ್ವರಿತವಾಗಿ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಅವಳಿ ನಗರದ ಜನತೆಯ ಮನೆ ಬಾಗಿಲಿಗೆ ತಲುಪುವಂತೆ ವ್ಯವಸ್ಥೆಯನ್ನು ಮಾಡುವುದಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ ಎಂದರು.
ಪಶ್ಚಿಮ ಕ್ಷೇತ್ರ ವ್ಯಾಪ್ತಿಯ ವಾರ್ಡ ನಂಬರ್ 19ರಲ್ಲಿ ಗೆಲುವು ಸಾಧಿಸಿದ ಎಂ.ಬಿ.ಎ ಪದವೀಧರೆ ಜ್ಯೋತಿ ಪಾಟೀಲ ಪಿಪಿಪಿ ಮಾದರಿಯಲ್ಲಿ ಸಾಂಪ್ರದಾಯಕ ಬೀದಿ ದೀಪಗಳನ್ನು ಬದಲಾಯಿಸಿ, ಎಲ್ ಇಡಿ ಮಾದರಿಯ ಬೀದಿ ದೀಪಗಳನ್ನು ಅಳವಡಿಸುವ ಮೂಲಕ ಈಗಿರುವ ವಿದ್ಯುತ್ ಬಿಲ್ಲಿನಲ್ಲಿ ಶೇ.47 ರಷ್ಟನ್ನು ಹಣವನ್ನು ಉಳಿಸುವುದು ನಮ್ಮ ಗುರಿಯಾಗಿತ್ತು.ಅದರಂತೆ 21 ವಾರ್ಡಗಳಲ್ಲಿ 20997 ಎಲ್ ಇಡಿ ದೀಪ ಅಳವಡಿಸಿದ್ದೇವೆ. ಸವದತ್ತಿಯ ರೇಣುಕಾ ಜಲಾಶಯದಿಂದ ಅಮ್ಮಿನಭಾವಿ ನೀರು ಶುದ್ಧಿಕರಣ ಘಟಕಕ್ಕೆ ನೀರು ತಂದು, ಅಲ್ಲಿಂದ ಹುಬ್ಬಳ್ಳಿ ಮತ್ತು ಧಾರವಾಡ ನಗರಗಳಿಗೆ ಎಪ್ರಿಲ್ 01 2026 ರಂದು 43ದಶಲಕ್ಷ ಲೀಟರ ನೀರನ್ನು ಪೂರೈಸಿ ಇತಿಹಾಸ ಬರೆಯಲಾಗಿದೆ. ಇಂದೋರ ನಗರಕ್ಕೆ ಅಧ್ಯಯನ ಪ್ರವಾಸಕ್ಕೆ ತೆರಳಿ ಸ್ವಚ್ಛ ಇಂದೋರ ಮಾದರಿ ಕುರಿತು ಅದ್ಯಯನವನ್ನು ಮಾಡಿ ಹುಬ್ಬಳ್ಳಿ ಧಾರವಾಡ ನಗರದಲ್ಲಿ ಸ್ವಚ್ಛತೆ, ಹಸಿರಿಕರಣ ಮಾಡುವ ನಿಟ್ಟಿನಲ್ಲಿ ಕಾರ್ಯ ನಡೆದಿದೆ. ಅಲ್ಲದೇ ಅವಳಿನಗರದ ವ್ಯಾಪ್ತಿಗೆ ಬರುವ ಎಲ್ಲ ಹಳ್ಳಿಗಳ ಅಭಿವೃದ್ದಿಗೆ ವಿಶೇಷ ಒತ್ತು ನೀಡಲು ಹಳ್ಳಿ ಅಭಿವೃದ್ದಿ ಅಡಿಯಲ್ಲಿ ಹಳ್ಳಿ ಇರುವ ವಾರ್ಡಗೆ ರೂ. 25 ಲಕ್ಷ ಅನುದಾನ ನೀಡಿದ್ದು, ಹಳ್ಳಿಗಳು ಕೂಡಾ ನಗರದ ಸಮಾನವಾಗಿ ಬೆಳೆಯಲು ಅನುವು ಮಾಡಿಕೊಟ್ಟಿದ್ದು ಪತ್ರಿಕಾ ಮಾಧ್ಯಮ ಪ್ರತಿನಿಧಿಗಳಿಗೆ ಕುಟುಂಬ ಆರೋಗ್ಯ ವಿಮೆ ನೀಡಲಾಗಿದೆಯಲ್ಲದೇ 2026-27ನೇ ಸಾಲಿನ ಮೊದಲ 75ದಿನಗಳಲ್ಲಿ 120 ಕೋಟಿ ತೆರಿಗೆ ಸಂಗ್ರಹಿಸಲಾಗಿದೆ. ಕಸ ಕಂಡಲ್ಲಿ ಪೋಟೊ ಕಳುಹಿಸಿ ವಿನೂತನ ಯೋಜನೆಯನ್ನೂ ಜಾರಿಗೊಳಿಸಿದ ತೃಪ್ತಿಯಿದೆ ಎಂದು ಹೇಳಿದರು.
ಮಹಾನಗದ ಮೇಯರ್ ಆಗಿ ಪಾಲಿಕೆಯ ಎಲ್ಲ ಸದಸ್ಯರಿಂದಲೂ ಸೈ ಎನ್ನಿಸಿಕೊಂಡ ಜ್ಯೋತಿ ಪಾಟೀಲ ಅವರ ಯಶಸ್ಸಿನಲ್ಲಿ ಹೋರಾಟದ ಮೂಲಕವೇ ಗುರುತಿಸಿಕೊಂಡ ಉಪ ಮೇಯರ್ ಸಂತೋಷ ಚವ್ಹಾಣ, ಅಲ್ಲದೇ ಸಭಾನಾಯಕರಾದ ಮಾಜಿ ಮೇಯರ್ ಈರೇಶ ಅಂಚಟಗೇರಿಯವರ ಅಲ್ಲದೇ ಹಿರಿಯ ಸದಸ್ಯರ ಮಾರ್ಗದರ್ಶನ,ಸಲಹೆಗಳು, ಆಯುಕ್ತ ಡಾ. ರುದ್ರೇಶ್ ಗಾಳಿ ಸಹಕಾರ ಸಹ ಮಹತ್ವದ ಪಾತ್ರ ವಹಿಸಿದೆಯಲ್ಲದೇ ವಿಪಕ್ಷ ನಾಯಕ ಇಮ್ರಾನ್ ಯಲಿಗಾರ ಸಹ ಅಭಿವೃದ್ದಿ ಕಾರ್ಯದಲ್ಲಿ ರಾಜಕೀಯ ಬೇಡ ಎಂಬಂತೆ ಸಾಥ್ ನೀಡಿದ್ದಾರೆ.
ಮೇಯರ್ ಆಗಿ ಆಯ್ಕೆಯಾದಾಗ ಕೇವಲ ಜ್ಯೋತಿ ಪಾಟೀಲ ಆಗಿದ್ದವಳು ಒಂದು ವರ್ಷದ ಅವಧಿಯಲ್ಲಿ ಸಮಾಜಮುಖಿ ಕೆಲಸಗಳ ಮೂಲಕ ಅಲ್ಲದೇ ಘನತೆ ತರುವ ನಡವಳಿಕೆಯಿಂದ ಜ್ಯೋತಿ ಅಕ್ಕನಾಗಿ ಹೊರಹೊಮ್ಮಿದ್ದು ಯಾವುದೇ ವಿವಾದಕ್ಕೆ ಆಸ್ಪದ ನೀಡದೆ ಸಮರ್ಥವಾಗಿ ಸರ್ವ ಸದಸ್ಯರ ಸಭೆಗಳನ್ನು ನಡೆಸಿ ಶ್ಲಾö್ಯಘನೆಗೆ ಪಾತ್ರರಾಗಿದ್ದು ಭವಿಷ್ಯದಲ್ಲಿ ತಾವೊಬ್ಬ ಸಮರ್ಥ ಮಹಿಳಾ ಧುರೀಣೆಯಾಗುವ ಭರವಸೆ ಮೂಡಿಸಿದ್ದಾರೆ. ಅಂತಿಮ ಸಭೆಯ ನಂತರ ಎಲ್ಲ ಸದಸ್ಯರೊಂದಿಗೆ ಪೋಟೊ ಸೆಷನ್ ಸಹ ನಡೆಸಿ ಸಂತಸ ಇಮ್ಮಡಿಗೊಳಿಸಿದ್ದಾರೆ.




