ಧಾರವಾಡ: ಮಹಾತ್ಮರ ಹೆಸರಿನಲ್ಲಿ
ಅಯೋಗ್ಯರಿಗೆ ಪ್ರಶಸ್ತಿ ನೀಡುವುದಕ್ಕೆ ದಲಿತ ಮುಖಂಡ ಪರಮೇಶ ಕಾಳೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿ ವರ್ಷ ಸರಕಾರದ ವತಿಯಿಂದ ಆಯೋಜಿಸುವ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ, ಡಾ.ಜಗಜೀವನರಾಮ ಜಯಂತಿ, ಮಹರ್ಷಿ ವಾಲ್ಮೀಕಿ ಜಯಂತಿ, ಶರಣ ಸಮಗಾರ ಹರಳಯ್ಯ,ಡೋಹರ ಕಕ್ಕಯ್ಯ ಇನ್ನಿತರ ಮಹಾತ್ಮರ ಜಯಂತಿ ಸಂದರ್ಭದಲ್ಲಿ ಸಮಾಜ ಸೇವೆ ಇನ್ನಿತರ ಕ್ಷೇತ್ರಗಳಲ್ಲಿನ ಸಾಧಕರನ್ನು ಸನ್ಮಾನಿಸಿ, ಗೌರವಿಸುತ್ತ ಬರಲಾಗುತ್ತದೆ.ಆದರೆ, ಇತ್ತೀಚಿನ ವರ್ಷಗಳಲ್ಲಿ ಯಾವುದೇ ಸೇವೆ- ಸಾಧನೆ ಮಾಡದ ಅಯೋಗ್ಯರು, ಸಮಾಜಘಾತುಕ ಮತ್ತು ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾದವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಆಘಾತಕಾರಿ ಸಂಗತಿ ಎಂದರೆ, ಪೊಲೀಸ್ ಇಲಾಖೆಯ ರೌಡಿ ಶೀಟಸ್೯ ಪಟ್ಟಿಯಲ್ಲಿರುವ ಗೂಂಡಾಗಳನ್ನು ಜಯಂತಿ ದಿನದಂದು ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಇದರಿಂದ ಸಮಾಜಕ್ಕೆ ಯಾವುದೇ ಕೊಡುಗೆ ನೀಡದವರು ಪ್ರಶಸ್ತಿ ಗಿಟ್ಟಿಸಿಕೊಂಡು ತಿರುಗಾಡುತ್ತಿದ್ದಾರೆ.
ಮಹಾತ್ಮರ ಹೆಸರಿನ ಪ್ರಶಸ್ತಿಗೆ ಆಯ್ಕೆ ಮಾಡುವಾಗ ಅವರ ಸಾಧನೆ, ಸಮಾಜಕ್ಕೆ ನೀಡಿದ ಕೊಡುಗೆ, ಸ್ವಚ್ಛ ಬದುಕು ಮಾಪಕ ಆಗಬೇಕು. ಜೊತೆಗೆ ಅವರ ಜೀವನದ ಹಿನ್ನೆಲೆಯ ಬಗ್ಗೆ ಪೊಲೀಸ್ ಇಲಾಖೆಯಿಂದ ಮಾಹಿತಿ ಪಡೆಯಬೇಕು.
ಆದರೆ, ರಾಜಕೀಯ ಮುಖಂಡರ ಶಿಫಾರಸ್ಸು ಮೇರೆಗೆ ಅಯೋಗ್ಯರಿಗೆ ಪ್ರಶಸ್ತಿ ನೀಡುವುದರಿಂದ ಸನ್ಮಾನಿಸುವದರಿಂದ ಮಹಾತ್ಮರ ಬೋಧನೆ, ಮೌಲ್ಯಗಳು, ತತ್ವಗಳಿಗೆ ಅಗೌರವ ತೋರಿಸಿದಂತಾಗುತ್ತದೆ.ಆದ್ದರಿಂದ ಈ ಬಗ್ಗೆ ಅಗತ್ಯ ಮಾಹಿತಿ ಸಂಗ್ರಹಿಸಿ ಅರ್ಹರನ್ನು ಪ್ರಶಸ್ತಿಗೆ ಆಯ್ಕೆ ಮಾಡುವ ಮೂಲಕ ಸಮಾಜಕ್ಕೆ ಮಾದರಿ ಆಗಬೇಕು. ಅಕಸ್ಮಾತ್ ಅಯೋಗ್ಯರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದರೆ, ಜಯಂತಿ ದಿನದಂದೇ ಹೋರಾಟ ನಡೆಸುವುದು ಅನಿವಾರ್ಯ ಆಗಲಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಎಚ್ಚರಿಸಿದ್ದಾರೆ.



