*ಉಪ ಮಹಾಪೌರರ ಪಟ್ಟ ಧಾರವಾಡಕ್ಕೆ – ಅನಿತಾ, ರತ್ನಾ, ಸುನೀತಾ ಮಧ್ಯೆ ಪೈಪೋಟಿ*
ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 25 ನೇ ಅವಧಿಗೆ ಮಹಾಪೌರ ಹಾಗೂ ಉಪ ಮಹಾಪೌರರ ಸ್ಥಾನಗಳಿಗೆ ಚುನಾವಣೆಯು ಜುಲೈ 4 ರಂದು ಬೆಳಿಗ್ಗೆ 9 ಗಂಟೆಗೆ ಪಾಲಿಕೆಯ ಸಭಾಭವನದಲ್ಲಿ ನಡೆಯಲಿದೆ.
ಅಂದು ಬೆಳಿಗ್ಗೆ 9 ಗಂಟೆಯಿಂದ 11 ಗಂಟೆಯವರೆಗೆ ಮಹಾಪೌರ ಹಾಗೂ ಉಪಮಹಾಪೌರರ ಸ್ಥಾನಗಳಿಗೆ ನಾಮಪತ್ರಗಳ ಸಲ್ಲಿಸುವುದು. ನಂತರ ನಾಮಪತ್ರಗಳ ಪರಿಶೀಲನೆ, ಕ್ರಮಬದ್ಧ ನಾಮಪತ್ರಗಳ ಘೋಷಣೆ, ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುವುದು, ಉಮೇದುವಾರರ ಪಟ್ಟಿ ಘೋಷಣೆ, ಅವಿರೋಧ ಆಯ್ಕೆಯಾದಲ್ಲಿ ಫಲಿತಾಂಶ ಘೋಷಣೆ, ಅಭ್ಯರ್ಥಿಯು ಒಬ್ಬರಕ್ಕಿಂತ ಹೆಚ್ಚಿಗೆ ಇದ್ದಲ್ಲಿ ಕೈ ಎತ್ತುವ ಮೂಲಕ ಮತದಾನ, ಮತಗಳ ಎಣಿಕೆ ಹಾಗೂ ಫಲಿತಾಂಶ ಘೋಷಣೆ ಪ್ರಕ್ರಿಯೆಗಳು ಜರುಗಲಿವೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾದ ರುದ್ರೇಶ ಘಾಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಸಕ್ತ ಅಂತಿಮ ಅವಧಿಯ ಮೇಯರ್ ಹಾಗೂ ಉಪಮೇಯರ್
ಈಗಾಗಲೇ ನಿರ್ಧರಿಸಿದ ಮೀಸಲಾತಿ ಅನ್ವಯ ಮೇಯರ್ ಪಟ್ಟ ಪರಿಶಿಷ್ಟ ಜಾತಿಯ ಮಹಿಳೆಗೆ ಮೀಸಲಾಗಿದ್ದು, ಉಪಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.
ಈ ಬಾರಿ ಆಡಳಿತಾರೂಢ ಬಿಜೆಪಿಯಲ್ಲಿ ಪಕ್ಷೇತರರಾಗಿ ಆಯ್ಕೆಯಾಗಿ ತದನಂತರ ಕಮಲ ಹಿಡಿದ ಇಬ್ಬರು ಎಸ್ಸಿ ಮಹಿಳೆಯರಿದ್ದು ಅವರಿಬ್ಬರ ಮಧ್ಯೆಯೆ ಪೈಪೋಟಿಯಿದೆ.
ಈ ಹಿಂದೆ ರಾಮಣ್ಣ ಬಡಿಗೇರ ಅವಧಿಯಲ್ಲಿ ಉಪಮೇಯರ್ ಆಗಿದ್ದ ದುರ್ಗಮ್ಮ ಶಶಿಕಾಂತ ಬಿಜವಾಡ ಹಾಗೂ ಮಾಜಿ ಮೇಯರ್ ವೆಂಕಟೇಶ ಮೇಸ್ತ್ರಿ ಪತ್ನಿ ಚಂದ್ರಿಕಾ ಮೇಸ್ತ್ರಿ ಇವರಲ್ಲೊಬ್ಬರಿಗೆ ಗೌನ್ ಭಾಗ್ಯ ನಿಶ್ಚಿತವಾಗಿದೆ.
ಪೂರ್ವ ಕ್ಷೇತ್ರ ವ್ಯಾಪ್ತಿಯ 69ನೇ ವಾರ್ಡಿನಿಂದ ಗೆದ್ದ ದುರ್ಗಮ್ಮ ಬಿಜವಾಡ 2024-25ರ ಅವಧಿಯಲ್ಲಿ ಉಪಮೇಯರ್ ಪಟ್ಟ ಎಸ್ ಸಿ ಮಹಿಳೆಗೆ ದೊರೆತಾಗ ಆಗ ಅಲಂಕಿರಿಸಿ ಅತ್ಯಂತ ಉತ್ತಮವಾಗಿಯೇ ಕಾರ್ಯ ನಿರ್ವಹಿಸಿದ್ದು ಪ್ಲಸ್ ಪಾಯಿಂಟಾದರೆ, ಸೆಂಟ್ರಲ್ ವ್ಯಾಪ್ತಿಯ 56ನೇ ವಾರ್ಡಿನಿಂದ ಗೆದ್ದ ಚಂದ್ರಿಕಾ ಮೇಸ್ತ್ರಿ ವಿವಿಧ ಸ್ಥಾಯಿ ಸಮಿತಿಗಳಲ್ಲಿ ಕೆಲಸ ಮಾಡಿದ್ದು, ಉತ್ತಮ ಶೈಕ್ಷಣಿಕ ಹಿನ್ನೆಲೆಯನ್ನೂ ಪಡೆದಿದ್ದಾರೆ.
ಅಂತಿಮ ವರ್ಷದಲ್ಲಾದರೂ ಮೇಯರ್ ಸ್ಥಾನ ಪೂರ್ವಕ್ಕೆ ದೊರೆಯುವುದೊ ಎಂಬುದನ್ನು ಕಾದು ನೋಡಬೇಕಿದೆ.
ಮೀಸಲಾತಿ ನಿರ್ಧಾರವಾದಾಗಿನಿಂದ ಈ ಇಬ್ಬರ ಮಧ್ಯೆಯೆ ಪೈಪೋಟಿಯಿದ್ದು, ಸದಸ್ಯರ ಅಭಿಪ್ರಾಯ ಕೇಳುವುದು ಔಪಚಾರಿಕವಾದರೂ ಕೆಂದ್ರ ಸಚಿವ ಪ್ರಹ್ಲಾದ ಜೋಶಿ ಅಭಿಪ್ರಾಯವೇ ಬಹುತೇಕ ಅಂತಿಮ ಎನ್ನಲಾಗುತ್ತಿದ್ದು ಶಾಸಕರಾದ ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ, ಪ್ರದೀಪ ಶೆಟ್ಟರ್, ನೂತನ ಪರಿಷತ್ ಸದಸ್ಯ ಲಿಂಗರಾಜ ಪಾಟೀಲ,ಜಿಲ್ಲಾ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿಯವರ ಅಭಿಪ್ರಾಯವೂ ಗಣನೆಗೆ ಬರಬಹುದಾಗಿದೆ.
ದುರ್ಗಮ್ಮ ಬಿಜವಾಡ ಪತಿ ಶಶಿಕಾಂತ ಬಿಜವಾಡ ಹಾಗೂ ಚಂದ್ರಿಕಾ ಅವರ ಪತಿ ವೆಂಕಟೇಶ ಮೇಸ್ತ್ರಿ ಇಬ್ಬರೂ ಪಕ್ಷದಲ್ಲಿ ತಮ್ಮದೇ ಹಿಡಿತ ಹೊಂದಿದ್ದು ಈ ನಿಟ್ಟಿನಲ್ಲಿ ಈಗಾಗಲೇ ಯತ್ನ ಆರಂಭಿಸಿದ್ದಾರೆ.
*ಬಿಜೆಪಿಗೆ ಬಹುಮತ*
82 ಸದಸ್ಯ ಬಲದ ಪಾಲಿಕೆಯಲ್ಲಿ 42 ಸದಸ್ಯರ ಬಲ(ಮೂವರು ಪಕ್ಷೇತರರು ಸೇರಿ) ಹೊಂದಿರುವ ಬಿಜೆಪಿಗೆ ಸಂಸದರು, ಶಾಸಕರು, ಪರಿಷತ್ ಸದಸ್ಯರ ಸಹಿತ ಜನಪ್ರತಿನಿಧಿಗಳ ಮತವೂ ದೊರೆಯಲಿದ್ದು ಅಧಿಕಾರಕ್ಕೇರಲು ಯಾವುದೇ ಸಮಸ್ಯೆಯಿಲ್ಲ. ಹೊಸದಾಗಿ ಪರಿಷತ್ ಗೆ , ರಾಜ್ಯಸಭೆಗೆ ಆಯ್ಕೆಯಾದ ಲಿಂಗರಾಜ ಪಾಟೀಲ, ಮಾ.ನಾಗರಾಜ ಇವರಿಗೆ ಸಹ ಮತಾಧಿಕಾರ ಇದ್ದರೂ ಇನ್ನೂ ಪ್ರಮಾಣ ಸ್ವೀಕರಿಸಿಲ್ಲವಾಗಿದ್ದು, ಮತದಾರರ ಪಟ್ಟಿ ಪ್ರಕಟವಾಗಿದೆ.
ಕಾಂಗ್ರೆಸ್ 36 ಸದಸ್ಯರ ಬಲ ಹೊಂದಿದ್ದು (ಮೂವರು ಪಕ್ಷೇತರರು ಸೇರಿ) ಜನಪ್ರತಿನಿಧಿಗಳ ಮತ ಸೇರಿಸಿದರೂ ಕಷ್ಟ ಸಾಧ್ಯವಾಗಿದ್ದು ಜೆಡಿಎಸ್ ಏಕೈಕ ಸದಸ್ಯೆ ಸಹ ಬಿಜೆಪಿಯನ್ನೇ ಈಗಾಗಲೇ ಬೆಂಬಲಿಸಿದ್ದು ಮೂವರು ಎಂಐಎಂ ಸದಸ್ಯರು ಇದುವರೆಗೆ ಯಾವುದೇ ಪಕ್ಷ ಬೆಂಬಲಿಸಿಲ್ಲ. ಐವರು ನಾಮನಿರ್ದೇಶಿತರು ಕಾಂಗ್ರೆಸ್ ಪಕ್ಷದವರಿದ್ದರೂ ಅವರಿಗೆ ಮತಾಧಿಕಾರ ಇರುವುದಿಲ್ಲ .

ಈ ಬಾರಿ ಮೇಯರ್ ಪಟ್ಟ ಹುಬ್ಬಳ್ಳಿಯಲ್ಲೇ ಉಳಿಯಲಿರುವುದರಿಂದ ಧಾರವಾಡಕ್ಕೆ ಉಪ ಮೇಯರ್ ಖಚಿತವಾಗಿದ್ದು ಮೊದಲನೇ ವಾರ್ಡಿನಿಂದ ಗೆದ್ದ ಅನಿತಾ ಚಳಗೇರಿ, ಒಂಬತ್ತ ನೇ ವಾರ್ಡಿನಲ್ಲಿ ಗೆದ್ದಿರುವ ರತ್ನಾಬಾಯಿ ನಾಝರೆ ಅಥವಾ27ನೆ ವಾರ್ಡಿನಿಂದ ಆಯ್ಕೆಯಾಗಿರುವ ಸುನೀತಾ ಮಾಳೋದಕರ ಇವರ ಪೈಕಿ ಒಬ್ಬರು ಖಚಿತ ಎಂದು ಹೇಳಲಾಗುತ್ತಿದೆ.



