ಗೃಹ ಸಚಿವರಿಗೆ ಅರವಿಂದ ಬೆಲ್ಲದ ಪತ್ರ
ಧಾರವಾಡ: ಲಕಮನಹಳ್ಳಿಯ ಚಂದ್ರಕಾಂತ್ ಬೆಲ್ಲದ ನಗರದಲ್ಲಿ ಆಶ್ರಯ ಮನೆಗಳನ್ನು ಕೊಡಿಸುವುದಾಗಿ ಶಾಸಕರ ಹೆಸರಿನಲ್ಲಿ ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ವಿಧಾನಸಭೆ ವಿಪಕ್ಷ ಉಪ ನಾಯಕ ಹಾಗೂ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕರಾದ ಅರವಿಂದ ಬೆಲ್ಲದ ಅವರು ರಾಜ್ಯ ಗೃಹ ಸಚಿವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಚಂದ್ರಕಾಂತ ಬೆಲ್ಲದ ನಗರದಲ್ಲಿ ಈಗಾಗಲೇ 1072 (ಜಿ+3) ಮನೆಗಳನ್ನು ನಿರ್ಮಿಸಿ ಅರ್ಹ ಫಲಾನುಭವಿಗಳಿಗೆ ಹಸ್ತಾಂತರಿಸಲಾಗಿದೆ, ಆದರೆ ಇದೀಗ ಕೆಲವರು ತಾವು ಶಾಸಕರ ಆಪ್ತರು ಎಂದು ಹೇಳಿಕೊಂಡು ಜನರನ್ನು ನಂಬಿಸಿ ವಂಚಿಸುತ್ತಿರುವ ಗಂಭೀರ ದೂರುಗಳು ಕೇಳಿಬಂದಿವೆ.
ಈ ಜಾಲವು ಕೇವಲ ಆರ್ಥಿಕ ವಂಚನೆಯಷ್ಟೇ ಅಲ್ಲದೆ ಕ್ರಿಮಿನಲ್ ಕೃತ್ಯಗಳಿಗೂ ಇಳಿದಿದ್ದು, ಇತ್ತೀಚೆಗೆ ಮಹಿಳೆಯೊಬ್ಬರಿಗೆ ಕರೆ ಮಾಡಿ ಅವರ ತಮ್ಮನನ್ನು ಅಪಹರಿಸಿದ್ದೇವೆ ಎಂದು ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿರುವುದು ಸಾರ್ವಜನಿಕರಲ್ಲಿ ಭೀತಿ ಮೂಡಿಸಿದೆ. ಈ ಪ್ರಕರಣದಲ್ಲಿ ಸ್ಥಳೀಯ ಪೊಲೀಸರ ನಡೆ ಸಂಶಯಾಸ್ಪದವಾಗಿದ್ದು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಅವರಿಗೆ ಸಹಕರಿಸುತ್ತಿರುವ ಸಂಶಯ ವ್ಯಕ್ತವಾಗುತ್ತಿದೆ.
ಗೃಹ ಸಚಿವರು ಈ ಕೂಡಲೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ವಿಶೇಷ ತನಿಖಾ ತಂಡದ ಮೂಲಕ ಸಮಗ್ರ ತನಿಖೆ ನಡೆಸಿ ಹಣ ವಸೂಲಿ ಮಾಡುವವರನ್ನು ಹಾಗೂ ಈ ಜಾಲದ ಹಿಂದಿರುವವರನ್ನು ತಕ್ಷಣ ಬಂಧಿಸಬೇಕೆಂದು ಬೆಲ್ಲದ ಅವರು ಪತ್ರದ ಮೂಲಕ ಒತ್ತಾಯಿಸಿದ್ದಾರೆ.




