ಶೀಘ್ರ ಆಗಮಿಸಿ ಅಭಿಪ್ರಾಯ ಸಂಗ್ರಹಿಸಲಿದ್ದಾರೆ ತೆಲಂಗಾಣ ಕೈ ಮುಖಂಡ ಹುಸೇನಿ
*ಮಹಾನಗರ ಪಟ್ಟ ಈ ಬಾರಿ ಬಹುಸಂಖ್ಯಾತರಿಗೆ ಸಾಧ್ಯತೆ*
ಹುಬ್ಬಳ್ಳಿ : ರಾಜ್ಯದ ಜಿಲ್ಲಾ ಕಾಂಗ್ರೆಸ್ ಸಮಿತಿಗಳ ಅಧ್ಯಕ್ಷರ ಆಯ್ಕೆಗೆ ಕೊನೆಗೂ ಅಖಿಲ ಭಾರತ ಕಾಂಗ್ರೆಸ್ ಸಮಿತಿ ‘ಸಂಘಟನ್ ಸೃಜನ್ ಅಭಿಯಾನ’ದ ಭಾಗವಾಗಿ ವಿವಿಧ ವೀಕ್ಷಕರನ್ನು ಎಐಸಿಸಿ ನೇಮಕ ಮಾಡಿದ್ದು, ಹುಬ್ಬಳ್ಳಿ ಧಾರವಾಡ ಮಹಾನಗರ ಮತ್ತು ಧಾರವಾಡ ಗ್ರಾಮೀಣದ ವೀಕ್ಷಕರಾಗಿ ತೆಲಂಗಾಣದ ವಕ್ಫ್ ಮಂಡಳಿ ಚೇರಮನ್ ಅಜ್ಮತುಲ್ಲಾ ಹುಸೇನಿ ನಿಯುಕ್ತಿ ಗೊಂಡಿದ್ದಾರೆ .

ವಿವಿಧ ಜಿಲ್ಲೆಗಳಿಗೆ ವೀಕ್ಷಕರ ನೇಮಕವನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ ಪ್ರಕಟಿಸಿದ್ದು, ಅತ್ಯಂತ ಮಹತ್ವದ ಜಿಲ್ಲಾ ಅಧ್ಯಕ್ಷರ ಆಯ್ಕೆಗೆ ದಿನಗಣನೆ ಆರಂಭವಾಗಿದ್ದು ವೀಕ್ಷಕರ ವರದಿ ಆಧಾರದ ಮೇಲೆ ನೂತನ ಅಧ್ಯಕ್ಷರ ನೇಮಕವಾಗಲಿದೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಅಧ್ಯಕ್ಷರಾಗಿ ಸುಮಾರು ಒಂಬತ್ತು ವರ್ಷದಿಂದ ಇರುವ ಅಲ್ತಾಫ್ ಹಳ್ಳೂರ ಮತ್ತು ಎಂಟು ವರ್ಷದಿಂದ ಇರುವ ಗ್ರಾಮೀಣ ಅಧ್ಯಕ್ಷ ಅನಿಲ ಕುಮಾರ ಪಾಟೀಲರ ಜಾಗಕ್ಕೆ ಹೊಸಬರ ನೇಮಕ ನಿಕ್ಕಿಯಾಗಿದೆ.

ಅವಳಿನಗರದ ಅಧ್ಯಕ್ಷ ಸ್ಥಾನದಲ್ಲಿ ಹಾಲಿ ಇರುವ ಅಲ್ಪಸಂಖ್ಯಾತದವರೇ ಮುಂದುವರಿಯುತ್ತಾರೋ ಅಥವಾ ಬಹುಸಂಖ್ಯಾತರಿಗೆ ನೀಡುವರೋ ಎಂಬುದು ಕುತೂಹಲಕಾರಿಯಾಗಿದೆ. ಈ ಬಾರಿ ಬಹುಸಂಖ್ಯಾತರಿಗೆ ಮಣೆ ಹಾಕಲಿದ್ದಾರೆ ಎಂಬ ಗುಸುಗುಸು ಇದೆ.
ಮಹಾನಗರದ ಅಧ್ಯಕ್ಷ ಸ್ಥಾನಕ್ಕೆ ಶಾಸಕ ಪ್ರಸಾದ ಅಬ್ಬಯ್ಯ ಅವರ ನಿಕಟವರ್ತಿಗಳಾದ ಹುಡಾ ಮಾಜಿ ಅಧ್ಯಕ್ಷ ಅನ್ವರ ಮುಧೋಳ, ಪಂಚಮಸಾಲಿ ಸಮುದಾಯದ ರಾಜಶೇಖರ ಮೆಣಸಿನಕಾಯಿ,
ಸಿಎಂ ಆಪ್ತರಾದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಾಗರಾಜ ಗೌರಿ, ರಾಜ್ಯ ವಕ್ಫ್ ಪರಿಷತ್ ನಿರ್ದೇಶಕ ಫಾರೂಕ್ ಅಬ್ಬೂನವರ ಹೆಸರು ಮುಂಚೂಣಿಗೆ ಬಂದಿದೆ.
ಅಲ್ಲದೇಯುವ ಮುಖಂಡರಾದ ಶಾಜಮಾನ್ ಮುಜಾಹಿದ, ಅಶ್ಪಾಕ್ ಕುಮಟಾಕರ , ರಜತ ಉಳ್ಳಾಗಡ್ಡಿಮಠ ಇವರ ಹೆಸರು ಕೇಳಿ ಬಂದಿದೆ.
ಧಾರವಾಡ ಗ್ರಾಮೀಣ ಅಧ್ಯಕ್ಷ ಸ್ಥಾನಕ್ಕೆ ಧಾರವಾಡ-71ದ ಗ್ರಾಮೀಣ ಬ್ಲಾಕ್ ಅಧ್ಯಕ್ಷ ಈಶ್ವರ ಶಿವಳ್ಳಿ,
ಗ್ರಾಮೀಣ ಪ್ರಚಾರ ಸಮಿತಿ ಅಧ್ಯಕ್ಷ ಕುಂದಗೋಳದ ಚಂದ್ರಶೇಖರ ಜುಟ್ಟಲ, ಕುಂದಗೋಳ ಬ್ಲಾಕ್ ಅಧ್ಯಕ್ಷ ಜಗದೀಶ ಉಪ್ಪಿನ , ಕಳೆದ ಲೋಕಸಭೆ ಚುನಾವಣೆಯಲ್ಲಿ ಸಚಿವ ಪ್ರಹ್ಲಾದ ಜೋಶಿಯವರಿಗೆ ಏದುಸಿರು ಬಿಡುವಂತೆ ಮಾಡಿದ್ದ ವಿನೋದ ಅಸೂಟಿ ಅವರ ಹೆಸರುಗಳು ಕೇಳಿ ಬರುತ್ತಿವೆ. ಮಹಾನಗರ ವಿಚಾರಕ್ಕೆ ಬಂದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಶಾಸಕ ಪ್ರಸಾದ ಅಬ್ಬಯ್ಯ ಗ್ರಾಮೀಣದ ವಿಚಾರದಲ್ಲಿ ಶಾಸಕ ಎನ್.ಎಚ್.ಕೋನರಡ್ಡಿ, ಮಾಜಿ ಶಾಸಕರಾದ ಕುಸುಮಾವತಿ ಶಿವಳ್ಳಿ, ಶಿವಲೀಲಾ ಕುಲಕರ್ಣಿ ಇನ್ನಿತರರ ಅಭಿಪ್ರಾಯ ಮಹತ್ವ ಪಡೆಯಲಿದೆ.
ಜಿಲ್ಲೆಗೆ ವೀಕ್ಷಕರಾಗಿ ನೇಮಕಗೊಂಡ ಅಜ್ಮತುಲ್ಲಾ ಹುಸೇನಿ ಕೆಲವೇ ದಿನಗಳಲ್ಲಿ ಆಗಮಿಸಿ ಎಲ್ಲ ನಾಯಕರ ಅಭಿಪ್ರಾಯ ಕ್ರೋಡಿಕರಿಸಿ ವರಿಷ್ಠರಿಗೆ ವರದಿ ನೀಡಲಿದ್ದು ಆ ವರದಿ ಆಧರಿಸಿ ನೇಮಕ ನಡೆಯಲಿದೆ.




