ಪಣಜಿ: ಬಾಲಿವುಡ್ ನ ಹಿರಿಯ ನಟ ನಾನಾ ಪಾಟೇಕರ್ (75) ಅವರು ಗುರುವಾರ ಬೆಳಗ್ಗೆ ನಿಧನರಾಗಿದ್ದಾರೆ. ಗೋವಾದಲ್ಲಿರುವ ತಮ್ಮ ನಿವಾಸದಲ್ಲಿ ತೀವ್ರ ಹೃದಯ ಸ್ತಂಭನಕ್ಕೆ ಒಳಗಾದ ಅವರನ್ನು ಆಸ್ಪತ್ರೆಗೆ ದಾಖಲಿಸಿ ವೈದ್ಯರು ಸುಮಾರು 45 ನಿಮಿಷಗಳ ಕಾಲ ನಿರಂತರವಾಗಿ ಸಿಪಿಆರ್ ನೀಡಿ ರಕ್ಷಿಸಲು ಪ್ರಯತ್ನಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಇಂದು ಮುಂಜಾನೆ ನಾನಾ ಪಾಟೇಕರ್ ಅವರು ಗೋವಾದ ತಮ್ಮ ನಿವಾಸದಲ್ಲಿ ಅಸ್ವಸ್ಥಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಅವರನ್ನು ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರ ಸತತ ಪ್ರಯತ್ನದ ನಡುವೆಯೂ ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ. ಬೆಳಗ್ಗೆ 5.10ರ ಸುಮಾರಿಗೆ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.

ಮಣಿಪಾಲ್ ಆಸ್ಪತ್ರೆಯ ಆಂಕೊಲಜಿ ವಿಭಾಗದ ಮುಖ್ಯಸ್ಥ ಡಾ. ಶೇಖರ್ ಸಾಲ್ಕರ್ ಅವರು, “ನಾನಾ ಪಾಟೇಕರ್ ಅವರನ್ನು ಉಳಿಸಲು ಸುಮಾರು 45 ನಿಮಿಷಗಳ ಕಾಲ ಸಿಪಿಆರ್ ನಡೆಸಲಾಯಿತು. ಆದರೂ ಯಾವುದೇ ಸ್ಪಂದನೆ ದೊರೆಯಲಿಲ್ಲ” ಎಂದು ತಿಳಿಸಿದ್ದಾರೆ. ವೈದ್ಯಕೀಯ-ಕಾನೂನು ಪ್ರಕರಣ ದಾಖಲಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ.
ತಮ್ಮ ವಿಶಿಷ್ಟ ಅಭಿನಯ, ವ್ಯಕ್ತಿತ್ವದಿಂದ ಪ್ರಸಿದ್ಧರಾಗಿದ್ದ ನ ಪಾಟೇಕರ್ ಅವರು ಹಲವು ದಶಕಗಳ ಕಾಲ ಹಿಂದಿ ಮತ್ತು ಮರಾಠಿ ಚಿತ್ರರಂಗದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದರು. ಕ್ರಾಂತಿವೀರ್, ಪರಿಂದಾ, ನಟಸಮ್ರಾಟ್, ಅಬ್ ತಕ್ ಛಪ್ಪನ್, ವೆಲ್ಕಮ್ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನೀಡಿದ ಅದ್ಭುತ ಅಭಿನಯದಿಂದ ಸಿನಿ ರಸಿಕರ ಮನ ಗೆದ್ದಿದ್ದರು.
ಪಾಟೇಕರ್ ಅವರ ಪುತ್ರ ಮಲ್ಹಾರ್ ಪಾಟೇಕರ್ ತಂದೆಯ ನಿಧನವನ್ನು ದೃಢಪಡಿಸಿದ್ದು, ಕುಟುಂಬದ ಸದಸ್ಯರು ಗೋವಾಗೆ ತೆರಳಿರುವುದಾಗಿ ತಿಳಿಸಿದ್ದಾರೆ.

ನಾನಾ ಪಾಟೇಕರ್ ಅವರ ಪಾರ್ಥಿವ ಶರೀರವನ್ನು ಮಧ್ಯಾಹ್ನದ ಬಳಿಕ ಪುಣೆಗೆ ತರಲಾಗುವುದು ಎಂದು ಮಲ್ಹಾರ್ ಪಾಟೇಕರ್ ತಿಳಿಸಿದ್ದಾರೆ



