*ಎಲೆಕ್ಟ್ರಾನಿಕ್ ಸಿಟಿಗೆ ದೇವರಾಜ್ ಅರಸು ಎಲೆಕ್ಟ್ರಾನಿಕ್ ಸಿಟಿ ನಾಮಕರಣ*
ಬೆಂಗಳೂರು: ದೇವರಾಜ ಅರಸು ಅವರಿಗೆ ಮರಣೋತ್ತರ ಭಾರತ ರತ್ನ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು. ಎಲೆಕ್ಟ್ರಾನಿಕ್ ಸಿಟಿಗೆ ದೇವರಾಜ ಅರಸು ಎಲೆಕ್ಟ್ರಾನಿಕ್ ಸಿಟಿ ಎಂದು ನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮಂಗಳವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಆಯೋಜಿಸಲಾಗಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ಅವರ 109 ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜದಲ್ಲಿ ಮೇಲು ಕೀಳು ಇರಬಾರದು. ಬಡವ ಬಲ್ಲಿದ ಇರಬಾರದು. ಜಾತಿ ವ್ಯವಸ್ಥೆ ಇರಬಾರದು, ಎಲ್ಲರೂ ಮನುಷ್ಯರಾಗಿ ಸಮಾನವಾಗಿ ಬದುಕಬೇಕು ಎಂಬುವುದೇ ಬಸವಾದಿ ಶರಣರ ಕನಸು. ಇದೇ ತತ್ವದ ಆಧಾರದ ಮೇಲೆ ಅಂಬೇಡ್ಕರ್ ಅವರು ಸಂವಿಧಾನ ರಚಿಸಿದರು. ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು ಅವರು ಸಹ ಈ ತತ್ವ ಸಿದ್ದಾಂತಗಳ ಆಧಾರದಲ್ಲಿ ಆಡಳಿತ ನಡೆಸಿ, ರಾಜ್ಯದಲ್ಲಿ ಹಲವಾರು ಕ್ರಾಂತಿಕಾರಿ ಬದಲಾವಣೆಗಳನ್ನು ತಂದರು ಎಂದರು.
ದೇವರಾಜ ಅರಸು ಅವರು ಅರಸು ಮನೆತನದಲ್ಲಿ ಹುಟ್ಟಿದ್ದರೂ, ಸಮಾಜದ ತಳ ಸಮುದಾಯವಾದ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರ ಬಗ್ಗೆ ಬಹಳ ಕಾಳಜಿ ಹೊಂದಿದ್ದರು. ಎಲ್ಲರಿಗೂ ಸಮಾನ ಅವಕಾಶ ಸಿಗಲು ಹಾವನೂರು ಅವರ ಅಧ್ಯಕ್ಷತೆಯಲ್ಲಿ ಹಿಂದುಳಿದ ವರ್ಗದ ಆಯೋಗ ರಚನೆ ಮಾಡಿ, ಎಷ್ಟೇ ವಿರೋಧ ಇದ್ದರೂ ಆಯೋಗದ ಶಿಫಾರಸುಗಳನ್ನು ಜಾರಿ ಮಾಡಿದರು. ಇದರಿಂದ ಹಿಂದುಳಿದ ವರ್ಗದವರಿಗೆ ಶಿಕ್ಷಣದಲ್ಲಿ ಮೀಸಲಾತಿ ಸಾಧ್ಯವಾಯಿತು. ತಳ ಸಮುದಾಯದವರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸಬಲಗೊಳಿಸಲು ಎಷ್ಟೇ ವಿರೋಧ ಇದ್ದರೂ, ಜಾರಿಗೊಳಿಸಿದರು. ಹಿಂದುಳಿದವರಿಗೆ ಶೇ.38 ರಷ್ಟು ಮೀಸಲಾತಿ ಸಿಕ್ಕಿದ್ದರೆ ಅದಕ್ಕೆ ಅರಸು ಅವರೇ ಕಾರಣರು ಎಂದು ಹೇಳಿದರು.
ಕರ್ನಾಟಕ ಏಕೀಕರಣ 1956 ನವಂಬರ್ 1 ರಂದೇ ಆಗಿದ್ದರೂ, 1973 ರಲ್ಲಿ ದೇವರಾಜ ಅರಸು ಅವರು ಕರ್ನಾಟಕ ಎಂದು ನಾಮಕರಣ ಮಾಡಿದರು. ಈ ಹಿನ್ನೆಲೆಯಲ್ಲಿಯೇ ನಾವು ಕರ್ನಾಟಕ ಸಂಭ್ರಮ ವರ್ಷಾಚರಣೆ ನಡೆಸುತ್ತಿದ್ದು, ನವೆಂಬರ್ನಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಈ ಸಂದರ್ಭದಲ್ಲಿ ಕನ್ನಡ ಭುವನೇಶ್ವರಿ ಪ್ರತಿಮೆಯನ್ನು ವಿಧಾನಸೌಧ ಮುಂಭಾಗದಲ್ಲಿ ನವೆಂಬರ್ 1 ರಂದು ಅನಾವರಣಗೊಳಿಸಲಾಗುವುದು ಎಂದು ಹೇಳಿದರು.
ಹಿಂದುಳಿದವರನ್ನು ತುಳಿಯಲು ಈಗಲೂ ನಿರಂತರ ಹುನ್ನಾರಗಳು ನಡೆಯುತ್ತಿವೆ. ನಾನು ಮುಖ್ಯಮಂತ್ರಿ ಆದ ಮೇಲೆ ಬಡವರಿಗಾಗಿ, ಮಹಿಳೆಯರಿಗಾಗಿ, ರೈತರಿಗೆ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದೇವೆ. ಐದು ಗ್ಯಾರಂಟಿ ಯೋಜನೆಗಳು ಬಡವರು, ಮಹಿಳೆಯರು, ರೈತರು, ಯುವಕರ ಪರವಾಗಿದೆ. ಆದರೆ ಬದಲಾವಣೆ ಬಯಸದ, ಬಡವರ ವಿರೋಧಿ ಪಟ್ಟಭದ್ರರು ಇದನ್ನು ವಿರೋಧಿಸುತ್ತಿದಾರೆ.
ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯವನ್ನು ಕಲ್ಪಿಸುವ ನಿಟ್ಟಿನಲ್ಲಿ ದೇಶದಲ್ಲೇ ಮೊದಲ ಬಾರಿಗೆ ನಾವು ಜಾತಿ ಗಣತಿ ಮಾಡಿದ್ದೇವೆ. ಜಾತಿ ಗಣತಿ ಮಾಡದೆ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿ ಗತಿ ತಿಳಿಯಲು ಹಾಗೂ ಸಾಮಾಜಿಕ ನ್ಯಾಯ ಒದಗಿಸಲು ಸಾಧ್ಯವಿಲ್ಲ. ಸಾಮಾಜಿಕ ನ್ಯಾಯ ಒದಗಿಸಲು ನಾವು ನಡೆಸುತ್ತಿರುವ ಪ್ರಯತ್ನಗಳಿಂದ ಹತಾಶರಾಗಿ ನನ್ನನ್ನು ರಾಜಕೀಯವಾಗಿ ಮುಗಿಸಲು ಹುನ್ನಾರ ಮಾಡುತ್ತಿದಾರೆಂದರು.
*ರಾಜ್ಯಪಾಲರಿಂದ ತಾರತಮ್ಯ*
ನಂತರ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ರಾಜ್ಯಪಾಲರು ಕೇಂದ್ರಸರ್ಕಾರದ ಪ್ರತಿನಿಧಿಯಾಗಿ ಕೆಲಸ ಮಾಡಬಾರದು ಎಂದು ಹೇಳಿದರು.
ತಮ್ಮ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವ ಮೂಲಕ ರಾಜ್ಯಪಾಲರು ತಾರತಮ್ಯವೆಸಗಿದ್ದು, ಅವರು ಭಾರತದ ರಾಷ್ಟ್ರಪತಿಯವರ ಪ್ರತಿನಿಧಿಗಳಾಗಿ ಕೆಲಸ ಮಾಡಬೇಕೆಂದರು.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಮೇಲಿನ ತನಿಖೆಗಾಗಿ ರಾಜ್ಯಪಾಲರು ಅನುಮತಿ ನೀಡಲು ಲೋಕಾಯುಕ್ತದವರು ಮನವಿ ಮಾಡಿರುವ ಬಗ್ಗೆ ಮಾಧ್ಯಮದವರಿಗೆ ತಮ್ಮ ಪ್ರತಿಕ್ರಿಯೆ ನೀಡುತ್ತಾ, ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ನಲ್ಲಿ ನಡೆದ ಗಣಿಗಾರಿಕೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಲೋಕಾಯುಕ್ತದವರು 23-11-2023 ರಂದು ಅನುಮತಿ ಕೋರಿದ್ದು, ಆ ಬಗ್ಗೆ ರಾಜ್ಯಪಾಲರು ಯಾವುದೇ ನಿರ್ಣಯ ಕೈಗೊಳ್ಳದ ಕಾರಣ ,ಲೋಕಾಯುಕ್ತ ಮತ್ತೊಮ್ಮೆ ಕೋರಿದ್ದಾರೆ. ಆದರೆ 26-07-2024 ರಂದು ಅಬ್ರಾಹಂ ರವರು ತನ್ನ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿದ ತಕ್ಷಣ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದು, ಇಂತಹ ತಾರತಮ್ಯವೇಕೆ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು.
ರಾಜ್ಯಪಾಲರನ್ನು ಮೂದಲಿಸಲಾಗಿದೆ ಎಂದು ಬಿಜೆಪಿಯವರು ಕಾಂಗ್ರೆಸ್ ನವರ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಶ್ರೀಮತಿ ಶಶಿಕಲಾ ಜೊಲ್ಲೆ , ಹೆಚ್.ಡಿ. ಕುಮಾರಸ್ವಾಮಿ , ಮುರುಗೇಶ್ ನಿರಾಣಿ, ಜನಾರ್ಧನ ರೆಡ್ಡಿನವರ ಮೇಲಿರುವ ಆರೋಪಗಳಿದ್ದು, ಇದುವರೆಗೆ ತನಿಖೆಗೆ ಆದೇಶಿಸಿರುವುದಿಲ್ಲ. ರಾಜ್ಯಪಾಲರ ಹುದ್ದೆ ಸಂವಿಧಾನಾತ್ಮಕವಾಗಿದ್ದು, ಅವರ ಮೇಲೆ ಗೌರವವಿದೆ. ಆದರೆ ರಾಜ್ಯಪಾಲರು ತಾರತಮ್ಯ ಧೋರಣೆ ಅನುಸರಿಸಬಾರದು ಎಂದರು.