ಯಲ್ಲಾಪುರ ಪೊಲೀಸರಿಂದ ಹುಬ್ಬಳ್ಳಿ ಮೂಲದ ಮೂವರ ಬಂಧನ
ಹುಬ್ಬಳ್ಳಿ : ನೆರೆಯ ಜಿಲ್ಲೆ ಉತ್ತರ ಕನ್ನಡದ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ಕಳೆದ ದಿ.8ರಂದು ಕಾರು ಸುಟ್ಟು ಹೋಗಿ ಚಾಲಕ ಸಾವು ಕಂಡ ಪ್ರಕರಣದಲ್ಲಿ ಮೃತಪಟ್ಟಿದ್ದು ಬೆಳಗಾವಿಯ ಮೋಸ್ಟ್ ವಾಂಟೆಡ್ ಕ್ರಿಮಿನಲ್ ನಿತೀಶ ಡಾಪಳೆ ಎನ್ನಲಾಗಿದೆ.

ಕಾರಿನಲ್ಲೇ ಸುಟ್ಟು ಕರಕಲಾದ ಡಾಪಳೆಯ ಕೊಲೆ ಮಾಡಿದ ಆತನ ಸಹಚರರಾದ ಮೂವರನ್ನು ಯಲ್ಲಾಪುರ ಪೊಲೀಸರು ಬಂಧಿಸಿದ್ದು ಹೂರಣ ಹೊರ ಬಂದಿದೆ. ಡಾಪಳೆಯನ್ನು ಆತನ ಆರು ಜನ ಸಹಚರರು ಹುಬ್ಬಳ್ಳಿಯಲ್ಲಿ ಕೊಲೆ ಮಾಡಿದ್ದು ನಂತರ ಯಲ್ಲಾಪುರದ ಅರೆಬೈಲ್ ಘಟ್ಟಕ್ಕೆ ತಂದು ಕಾರು ಸಮೇತ ಸುಟ್ಟು ಅಪಘಾತದಲ್ಲಿ ಮೃತಪಟ್ಟ ರೀತಿಯಲ್ಲಿ ಸುಟ್ಟುಹಾಕಿದ್ದರು.
ಮರಣೋತ್ತರ ಪರೀಕ್ಷೆ ನಡೆಸಿದಾಗ ಹತ್ಯೆಯು ಬಯಲಿಗೆ ಬಂದು ತಕ್ಷಣ ತನಿಖೆ ಕೈಗೊಂಡ ಪೊಲೀಸರು ಹುಬ್ಬಳ್ಳಿ ಮೂಲದ ನಯೀಮ್ ಮೌಲಾ, ದಾದಾ ಪೀರ್, ಶೋಯಬ್ ಎಂಬುವರನ್ನು ಬಂಧಿಸಿದ್ದು ತಲೆಮರಸಿಕೊಂಡ ಶಾನು, ಜಮೀರ್, ಹಾಗೂ ಆಯುಬ್ ಎಂಬುವರಿಗೆ ಜಾಲ ಬೀಸಿದ್ದಾರೆ.
ಗಾಂಜಾ, ಚೈನ್ ಸ್ನಾಚಿಂಗ್ ಸಹಿತ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಡಾಪಳೆ ಗೋವಾ, ಮಹಾರಾಷ್ಟ್ರದ ಪೊಲೀಸರಿಗೆ ಬೇಕಾದವನಾಗಿದ್ದ. ಹುಬ್ಬಳ್ಳಿ ಗೋಕುಲ ನಗರ ಠಾಣೆಯಲ್ಲಿಯೂ ಈ ಹಿಂದೆ ಕೇಸ್ ದಾಖಲಾಗಿ ಬಂಧಿಸಲ್ಪಟ್ಟಿದ್ದ.




