ಹುಬ್ಬಳ್ಳಿ: ಹುಬ್ಬಳ್ಳಿ ಗ್ರಾಮೀಣ ಹಾಗೂ ಹಾನಗಲ್ ಪೊಲೀಸ್
ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಕುಖ್ಯಾತ ಕಳ್ಳರನ್ನು ಬಂಧಿಸಿದ ಪೊಲೀಸರು ಅವರಿಂದ 1.15 ಕೋಟಿ ಮೌಲ್ಯದ ಬಂಗಾರ-ಬೆಳ್ಳಿ ಆಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ ವಾಹನ ವಶಕ್ಕೆ ಪಡೆದಿದ್ದಾರೆ.

ಲಕ್ಷ್ಮೇಶ್ವರದ ಬಾಳೆಹೊಸೂರಿನ ಶಿವರಾಜ ಮೋಡಕೇರ ಮತ್ತು ಸಿಂಧನೂರಿನ ಅಂಬಾಮಠದ ರಮೇಶ್ ಕೊಂಚಿಕೊರವರ ಬಂಧಿತ ಆರೋಪಿಗಳಾಗಿದ್ದಾರೆ.
ಕಳೆದ ಏಪ್ರಿಲ್ನಲ್ಲಿ ಹುಬ್ಬಳ್ಳಿ ಗ್ರಾಮೀಣ ವ್ಯಾಪ್ತಿಯ ಕಿರೇಸೂರ ಗ್ರಾಮದ ಮನೆಯೊಂದರಲ್ಲಿ ಕಳವು ನಡೆದಿತ್ತು. ಅಲ್ಲದೆ, ಎರಡು ದಿನಗಳ ಹಿಂದೆ ಹಾವೇರಿ ಜಿಲ್ಲೆಯ ಹಾನಗಲ್ ಪೊಲೀಸ್ ಠಾಣೆ ವ್ಯಾಪ್ತಿಯ ಆಭರಣ ಅಂಗಡಿಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಹುಬ್ಬಳ್ಳಿ ಗ್ರಾಮೀಣ ಹಾಗೂ ಹಾನಗಲ್ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ 6 ಜನರ ತಂಡದ ಇಬ್ಬರನ್ನು ಮಾತ್ರ ಬಂಧಿಸಿದ್ದು, ಉಳಿದವರಿಗೆ ಜಾಲ ಬೀಸಿದ್ದಾರೆ.
ಬಂಧಿತರಿಂದ 310 ಗ್ರಾಂ ಬಂಗಾರ, 26 ಕೆ.ಜಿ. ಬೆಳ್ಳಿ ಆಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ ತೆಲಂಗಾಣ ನೋಂದಣಿಯ ಒಂದು ಬುಲೆರೋ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆ ವೇಳೆ ಆರೋಪಿಗಳು ಹಲವು ಕಳವು ಪ್ರಕರಣಗಳ ಬಗ್ಗೆ ಮಾಹಿತಿ ಬಾಯ್ದಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳನ್ನು ಬಂಧಿಸಿದ ಪೊಲೀಸ್ ಅಧಿಕಾರಿ ಮುರಗೇಶ ಚನ್ನಣ್ಣನವರ ಹಾಗೂ ಸಿಬ್ಬಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯಾ ಮತ್ತು ಡಿವೈಎಸ್ಪಿ ವಿನೋದ ಮುತ್ತೇದಾರ ಅಭಿನಂದನೆ ಸಲ್ಲಿಸಿ ಬಹುಮಾನ ಘೋಷಿಸಿದ್ದಾರೆ.
ಈ ತಂಡದಲ್ಲಿ ಹಾನಗಲ್, ನವಲಗುಂದ ಪಿಐಗಳು ಸೇರಿ ಹಲವರಿದ್ದರು.



