ಅಳಿಯ ಗಾಡಿವಡ್ಡರ, ಗುತ್ತಿಗೆದಾರ ಸುಮಿತ್ ಹೆಗಡೆ ಕಚೇರಿ ಮೇಲೂ ರೇಡ್*
ಧಾರವಾಡ : ಇಲ್ಲಿನ ಸಣ್ಣ ನೀರಾವರಿ ಇಲಾಖೆಯ ಎಕ್ಸಿಕ್ಯೂಟಿವ್ ಇಂಜಿನಿಯರ್ ದೇವರಾಜ ಶಿಗ್ಗಾಂವಿ ಎಂಬುವವರ ಮನೆ, ಕಚೇರಿ ಮೇಲೆ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಶನಿವಾರ ದಾಳಿ ನಡೆಸಿದ್ದಾರೆ.

ಸಣ್ಣ ನೀರಾವರಿ ಇಲಾಖೆಯಲ್ಲಿ 2018 ರಿಂದ 2023 ವರೆಗೆ ಕಾಮಗಾರಿಯಲ್ಲಿ ಸರ್ಕಾರಕ್ಕೆ ಆರ್ಥಿಕ ನಷ್ಟ ಹಾಗೂ ಅವ್ಯವಹಾರ ನಡೆಸಿದ್ದಾರೆ ಎಂದು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಧಾರವಾಡ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸಿದ್ಧಲಿಂಗಪ್ಪ ಅವರ ನೇತೃತ್ವದಲ್ಲಿ ಗದಗ ಡಿಎಸ್ಪಿ ವಿಜಯಕುಮಾರ್ ಬಿರಾದಾರ ಮತ್ತು ಇತರ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ತಂಡ ದಾಳಿ ಮಾಡಿ, ದಾಖಲೆಗಳನ್ನು ಪರಿಶೀಲಿಸಿ ಮಾಹಿತಿ ಕಲೆ ಹಾಕಿದೆ.
ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ಶಿಗ್ಗಾಂವಿ ಅವರ ಅಳಿಯ ಹಾಗೂ ಗುತ್ತಿಗೆದಾರ ಶ್ರೀಕೃಷ್ಣ ಗಾಡಿವಡ್ಡರ ಹಾಗೂ ಕ್ಲಾಸ್ ಒನ್ ಗುತ್ತಿಗೆದಾರ ಸುಮೀತ್ ಹೆಗಡೆ ಅವರ ಕಚೇರಿ ಮೇಲೆ ಕೂಡಾ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.




