ವಿದ್ಯುನ್ಮಾನ ಮಾಧ್ಯಮದವರ ಜೊತೆ ಸಂವಾದದಲ್ಲಿ ಆಯುಕ್ತ ಬೋರಸೆ ವಿಶ್ವಾಸ
ಹುಬ್ಬಳ್ಳಿ : ಹುಬ್ಬಳ್ಳಿ – ಧಾರವಾಡ ಅವಳಿ ನಗರದಲ್ಲಿ ಒಂದು ತಿಂಗಳಲ್ಲಿ ಪೊಲೀಸ್ ಇಲಾಖೆಗೆ ಹೊಸ ರೂಪ ನೀಡೋದಾಗಿ ಪೊಲೀಸ್ ಆಯುಕ್ತ ಬೋರಸೆ ಭೂಷಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯ ಕರ್ನಾಟಕ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ಸ್ ಅಸೋಸಿಯೇಷನ್ ಕಛೇರಿಯಲ್ಲಿ ವಿದ್ಯುನ್ಮಾನ ಮಾಧ್ಯಮದವರ ಜೊತೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಅವಳಿ ನಗರದಲ್ಲಿ ದಿನೇ ದಿನೇ ವಾಹನ ದಟ್ಟಣೆ ಹೆಚ್ಚುತ್ತಿದೆ. ಅದಕ್ಕೆ ಅನುಗುಣವಾಗಿ ಟ್ರಾಫಿಕ್ ವ್ಯವಸ್ಥೆ ಸರಿಪಡಿಸಬೇಕಿದೆ. ಹಲವಾರು ಕಡೆ ಟ್ರಾಫಿಕ್ ಸಿಗ್ನಲ್ ಗಳು ಕೆಲಸ ಮಾಡ್ತಿಲ್ಲ. ಅವೆಲ್ಲವನ್ನೂ ಸರಿಪಡಿಸೋ ಜೊತೆಗೆ, ಸಿಸಿ ಕ್ಯಾಮರಾ ಅಳವಡಿಕೆ ಪ್ರಮಾಣವನ್ನೂ ಹೆಚ್ಚಿಸಲಾಗುವುದು. ಟ್ರಾಫಿಕ್ ದಟ್ಟಣೆ ವೇಳೆ ದಂಡ ಹಾಕದಿರುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ದಂಡ ಹಾಕುವ ವೇಳೆ ಬಾಡಿ ಕ್ಯಾಮರಾ ಕಡ್ಡಾಯವಾಗಿ ಆನ್ ಇರಿಸಿಕೊಳ್ಳಲು ಸೂಚಿಸಿದೆ. ಜನದಟ್ಟಣೆ ಇರೊ ಮಾರ್ಕೆಟ್ ಮತ್ತಿತರ ಪ್ರದೇಶಗಳಲ್ಲಿ ವಾಹನ ಪಾರ್ಕಿಂಗ್ ಗಾಗಿ ಪ್ರತ್ಯೇಕ ಸ್ಥಳ ಗುರುತುಪಡಿಸಲಾಗುವುದು. ಪಾಲಿಕೆ ಜೊತೆಗೂಡಿ ಪಾರ್ಕಿಂಗ್ ವ್ಯವಸ್ಥೆ ಸುಧಾರಣೆಗೆ ತರಲಾಗುವುದು. ಇನ್ನು ಮುಂದೆ ಅನುಮತಿ ಕೊಡೋ ಕಟ್ಟಡಗಳಿಗೆ ಕಡ್ಡಾಯವಾಗಿ ಪಾರ್ಕಿಂಗ್ ಸ್ಥಳ ಬಿಡುವಂತೆ ಸೂಚಿಸಲಾಗುವುದು ಎಂದರು.
ಡ್ರಂಕ್ ಆ್ಯಂಡ್ ಡ್ರೈವ್ ಮಾಡುವವರಿಂದ ಬೇರೆ ವಾಹನ ಸವಾರರಿಗೂ ತೊಂದರೆಯಾಗುತ್ತಿದೆ. ಅದಕ್ಕೆ 10 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ. ಒಮ್ಮೆ ಸಿಕ್ಕಬಿದ್ದರೆ ದಂಡ ವಿಧಿಸುತ್ತೇವೆ. ಮತ್ತೆ ಪುನರಾವರ್ತನೆಯಾದರೆ ಡ್ರೈವಿಂಗ್ ಲೈಸನ್ಸ್ ರದ್ದುಗೊಳಿಸುವ ಮತ್ತಿತರ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಅವರು ತಿಳಿಸಿದರು.
*ಸೈಬರ್ ಲ್ಯಾಬ್*
ಸೈಬರ್ ಕ್ರೈಂ ಏಡ್ಸ್ ರೀತಿಯಲ್ಲಿ ವ್ಯಾಪಿಸಿದೆ. ಸಮಾಜಕ್ಕೆ ದೊಡ್ಡ ಪಿಡುಗಾಗಿ ಪರಿಣಮಿಸಿದೆ. ಡಿಜಿಟಲ್ ಅರೆಸ್ಟ್ ಸೇರಿ ಬೇರೆ ಬೇರೆ ರೀತಿಯಲ್ಲಿ ವಂಚನೆಗಳು ನಡೆಯುತ್ತಿವೆ. ಇದರ ನಿಯಂತ್ರಣಕ್ಕೆ ಅತ್ಯಾಧುನಿಕ ಉಪಕರಣಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ಸೈಬರ್ ಲ್ಯಾಬ್ ಆರಂಭಕ್ಕೂ ಚಿಂತನೆ ನಡೆಸಲಾಗಿದೆ. ಜನತೆಯೂ ಜಾಗರೂಕರಾಗರಾಗಬೇಕಿದೆ. ಘಟನೆ ನಡೆದ ತಕ್ಷಣ ಸೂಕ್ತ ದಾಖಲೆಗಳೊಂದಿಗೆ ದೂರು ನೀಡಬೇಕು ಎಂದರು.
ಮಾಂಜಾ ಥ್ರೆಡ್ ಮಾರುವವರಿಗೆ ಮತ್ತು ಬಳಕೆ ಮಾಡುವವರಿಗೂ ಭೂಷಣ ಬೋರಸೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಪ್ರಕಾಶ ನೂಲ್ವಿ ಅವರು, ಬೋರಸೆ ಭೂಷಣ ಅವರ ಕಾರ್ಯವನ್ನು ಶ್ಲಾಘಿಸಿದರು. ಈ ವೇಳೆ ಬೋರಸೆ ಭೂಷಣ ಅವರನ್ನು ಸಂಘದ ಪದಾಧಿಕಾರಿಗಳು ಸನ್ಮಾನಿಸಿ ಗೌರಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಶಿವರಾಮ ಅಸುಂಡಿ ಸ್ವಾಗತಿಸಿದರು. ಉಪಾಧ್ಯಕ್ಷರಾದ ಗುರುರಾಜ ಹೂಗಾರ, ಕಲ್ಮೇಶ ಮಂಡ್ಯಾಳ, ಖಜಾಂಚಿ ಮೆಹಬೂಬ ಮುನವಳ್ಳಿ, ಉಪಾಧ್ಯಕ್ಷರಾದ ಯಲ್ಲಪ್ಪ ಸೋಲಾರಗೊಪ್ಪ, ಸಂತೋಷ ಅರಳಿ ಮತ್ತಿತರರು ಉಪಸ್ಥಿತರಿದ್ದರು.




