*ಹೊರಟ್ಟಿ ಪಟ್ಟಿನ ಪರಿಣಾಮ ಮತ್ತೆ ಕೊರವಿಗೆ ‘ಆರೋಗ್ಯ’ ಭಾಗ್ಯ \ ದಾಖಲೆ ಬರೆದ ಮಹದೇವಪ್ಪ ನರಗುಂದ*
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗಳ ಅಧ್ಯಕ್ಷರುಗಳಾಗಿ ಬಿಜೆಪಿಯ ಶಿವಪ್ಪ ಉರ್ಪ ಆನಂದ ಯಾವಗಲ್, ಮಲ್ಲಿಕಾರ್ಜುನ ( ರಾಜಣ್ಣ) ಕೊರವಿ, ಚಂದ್ರಿಕಾ ಮೇಸ್ತ್ರಿ ಹಾಗೂ ಶಂಕರ ಶೇಳಕೆ ಅವಿರೋಧವಾಗಿ ಆಯ್ಕೆಯಾದರು.

ಇಂದು ಮಧ್ಯಾಹ್ನ ಮೇಯರ್ ದುರ್ಗಮ್ಮ ಬಿಜವಾಡ ಅಧ್ಯಕ್ಷತೆಯಲ್ಲಿ ಚುನಾವಣಾ ಪ್ರಕ್ರಿಯೆ ನಡೆದು ಎಲ್ಲ ಸಮಿತಿಗಳಿಗೂ ಒಬ್ಬೊಬ್ಬರೆ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆಯಾದರೆಂದು ಪ್ರಕಟಿಸಲಾಯಿತು.
ಅಧ್ಯಕ್ಷರು ಯಾರಾಗಬೇಕೆಂಬ ಮುಂದಾಲೋಚನೆಯನ್ನು ಬಿಜೆಪಿ ಕೋರ ಕಮೀಟಿಯಲ್ಲಿ ತೀರ್ಮಾನಿಸಿಯೇ ನಾಲ್ಕು ಸ್ಥಾಯಿ ಸಮಿತಿಗಳಿಗೆ ಸದಸ್ಯರ ಅವಿರೋಧ ಆಯ್ಕೆ ಕಳೆದ ದಿ. 16ರಂದು ನಡೆದಿದ್ದು, ಈ ಮೊದಲಿನ ಲೆಕ್ಕಾಚಾರದಂತೆ ಪಾಲಿಕೆಯಲ್ಲಿ ಅತ್ಯಂತ ಲಾಭದ ಸಮಿತಿ ಎಂದೇ ಕರೆಯುವ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಗೆ ಮೇಯರ್ ಸ್ಥಾನದಿಂದ ಅಂತಿಮ ಕ್ಷಣದಲ್ಲಿ ವಂಚಿತರಾದ ಮಾಜಿ ಮೇಯರ್ ವೆಂಕಟೇಶ ಮೇಸ್ತ್ರಿ ಪತ್ನಿ ಚಂದ್ರಿಕಾ ಮೇಸ್ತ್ರಿ ಫಿಕ್ಸ ಆಗಿತ್ತು .ಅದೇ ರೀತಿ ಆಗಿದೆ.ಅಲ್ಲದೇ ಶಾಸಕ ಅರವಿಂದ ಬೆಲ್ಲದ ಒತ್ತಡದ ಪರಿಣಾಮ 21ನೇ ವಾರ್ಡಿನ ಆನಂದ ಯಾವಗಲ್ರಿಗೆ ನಿರೀಕ್ಷೆಯಂತೆಯೇ ತೆರಿಗೆ ನಿರ್ಧರಣೆ, ಹಣಕಾಸು ಆಫೀಲುಗಳ ಸಮಿತಿ ಅಧ್ಯಕ್ಷ ಪಟ್ಟ ದಕ್ಕಿದೆ. ಲೆಕ್ಕಕ್ಕಷ್ಟೆ ಸೀಮಿತವಾದ ಲೆಕ್ಕ ಸಮಿತಿ ಪಟ್ಟ ಮೊದಲಿನ ನಿರ್ಧಾರದಂತೆ ಶಂಕರ ಶೇಳಕೆಯವರಿಗೆ ದೊರಕಿದೆ.
*ಆರೋಗ್ಯ ಸಮಿತಿಗೆ ಮತ್ತೆ ರಾಜಣ್ಣ* : ಸಾರ್ವಜನಿಕ ಆರೋಗ್ಯ, ಶಿಕ್ಷಣ ವ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಸದಸ್ಯರ ಆಯ್ಕೆ ಸಂದರ್ಭದಲ್ಲಿ ಹಿರಿಯ ಸದಸ್ಯ ಚಂದ್ರಶೇಖರ ಮನಗುಂಡಿ ಅಂತಿಮಗೊಂಡರೂ ಅಂತಿಮವಾಗಿ ರಾಜಣ್ಣ ಕೊರವಿಗೆ ದಕ್ಕಿದೆ.
ಇದೇ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಈಗಾಗಲೇ ಒಮ್ಮೆ ರಾಜಣ್ಣ ನಿರ್ವಹಿಸಿದ್ದರು.
ಮಾಜಿ ಸಭಾಪತಿ ಬಸವರಾಜ ಹೊರಟ್ಟಿಯವರು ರಾಜಣ್ಣಗೆ ನೀಡಲೇಬೇಕು ಎಂದು ಪಟ್ಟು ಹಿಡಿದ ಪರಿಣಾಮ ದೊರಕಿದೆ ಎಂದು ಮೂಲಗಳು ಹೇಳಿವೆ.
ಒಟ್ಟಿನಲ್ಲಿ ಸೆಂಟ್ರಲ್ ಕ್ಷೇತ್ರಕ್ಕೆ ಎರಡು ಅಧ್ಯಕ್ಷ ಸ್ಥಾನ ದೊರೆತಂತಾಗಿದೆ.

*ಸತತ ಐದನೆ ಬಾರಿ ಸದಸ್ಯ ಸ್ಥಾನ* : ಕಳೆದ ಅವಧಿಯಲ್ಲಿ ಆರೋಗ್ಯ ಸ್ಥಾಯಿ ಸಮಿತಿಗೆ ಅಧ್ಯಕ್ಷರಾಗಿದ್ದ ಮಹದೇವಪ್ಪ ನರಗುಂದ ಈ ಬಾರಿಯೂ ಆರೋಗ್ಯ ಸಮಿತಿಗೆ ಸದಸ್ಯರಾಗುವುದರೊಂದಿಗೆ ಸತತ ಐದು ವರ್ಷವೂ ಸದಸ್ಯರಾದ ಹಿರಿಮೆಗೆ ಭಾಜನರಾಗಿ ದಾಖಲೆ ಬರೆದಿದ್ದಾರೆ. ಮೊದಲಿನ ಮೂರು ಅವಧಿಯೂ ಅವರು ಸದಸ್ಯರಾಗಿದ್ದರು.



