*ತ್ರಿವೇಣಿ ಸಂಗಮದಲ್ಲಿ ತೀರ್ಥಸ್ನಾನ ಗೈದು ಭಕ್ತಿ ಸಮರ್ಪಣೆ*
ಪ್ರಯಾಗರಾಜ : ವಯ ಪ್ರಯಾಗರಾಜ್ ಮಹಾಕುಂಭದಲ್ಲಿ ಇಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಕುಟುಂಬ ಸಹಿತ ಭಾಗಿಯಾಗಿ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನಗೈದರು.
ತ್ರಿವೇಣಿ ಸಂಗಮದ ಪವಿತ್ರ ಗಂಗೆಯಲ್ಲಿ ಮುಳಿಗೇಳುತ್ತ ತೀರ್ಥಸ್ನಾನ ಮಾಡಿದ ಸಚಿವರು, ಮಂತ್ರ ಪಠಣದೊಂದಿಗೆ ದೇವರಿಗೆ ನಮಸ್ಕರಿಸಿ, ಲೋಕದ ಸುಭಿಕ್ಷೆಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಕುಟುಂಬ ಸಮೇತರಾಗಿ ವಿಶಿಷ್ಠ ಭಂಗಿಯ ಭಗವಾನ್ ಹನುಮ ದೇವಾಲಯ ಹಾಗೂ ಅಕ್ಷಯವತ್ ಗೆ ತೆರಳಿ ದೇವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.
ವಿಶ್ವದ ಅತ್ಯಂತ ದೊಡ್ಡ ಧಾರ್ಮಿಕ ಉತ್ಸವ ಮತ್ತು ಹಿಂದೂ ಧರ್ಮದ ಶ್ರೇಷ್ಠ ಆಧ್ಯಾತ್ಮಿಕ ಮಹೋತ್ಸವವೂ ಆಗಿರುವ ಈ ಮಹಾ ಕುಂಭ ಮೇಳದಲ್ಲಿ ಸಚಿವ ಪ್ರಲ್ಹಾದ ಜೋಶಿ ಅವರ ಇಡೀ ಕುಟುಂಬವೇ ಭಾಗಿಯಾಗಿ ಶ್ರದ್ಧಾಭಕ್ತಿ ಮೆರೆಯಿತು.
ಸಚಿವರೊಂದಿಗೆ ಪತ್ನಿ ಜ್ಯೋತಿ ಜೋಶಿ, ಮಕ್ಕಳಾದ ಅರ್ಪಿತಾ ಜೋಶಿ, ಅನನ್ಯಾ ಜೋಶಿ, ಅನುಷಾ ಜೋಶಿ ಹಾಗೂ ಸಹೋದರ ಗೋವಿಂದ ಜೋಶಿ-ಕಮಲಾ ಜೋಶಿ ದಂಪತಿ ಸೇರಿದಂತೆ ಮಕ್ಕಳು, ಮೊಮ್ಮಕ್ಕಳಾದಿಯಾಗಿ ಕುಟುಂಬದ ಸದಸ್ಯರೆಲ್ಲರೂ ಪುಣ್ಯಸ್ನಾನ ಗೈದು ಭಕ್ತಿ ಸಮರ್ಪಿಸಿದರು.
ಈ ವೇಳೆ ಪ್ರಯಾಗರಾಜ್ ನಲ್ಲಿ ಸುದ್ದಿ ಸಂಸ್ಥೆ ಜತೆ ಮಹಾಕುಂಭದ ಅನನ್ಯ ಅನುಭವವನ್ನು ಹಂಚಿಕೊಂಡರು ಸಚಿವ ಪ್ರಲ್ಹಾದ ಜೋಶಿ. “ಪ್ರಯಾಗರಾಜ್ ಮಹಾಕುಂಭ ಮೇಳ ಹಿಂದೂ ಧರ್ಮದ ಒಂದು ಸಾಮೂಹಿಕ ತೀರ್ಥಯಾತ್ರೆಯಾಗಿ ಯಶಸ್ವಿಯಾಗಿ ಜರಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಪ್ರಯಾಗರಾಜ್ ಮಹಾಕುಂಭದಲ್ಲಿ ಪ್ರಧಾನಿ ಮೋದಿಜಿ ಅವರ ನೇತೃತ್ವ, ಮಾರ್ಗದರ್ಶನದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅದ್ಭುತ ವ್ಯವಸ್ಥೆ ಕಲ್ಪಿಸಿದ್ದಾರೆ ಎಂದು ಸಚಿವ ಜೋಶಿ ಕೊಂಡಾಡಿದರು.
ಸಾವಿರಾರು ವರ್ಷಗಳಿಂದ, ವೇದ-ಪುರಾಣಕಾಲದಿಂದ ಮಹಾಕುಂಭ ಮೇಳ ಆಚರಣೆಯಲ್ಲಿದೆ. ದೇಶದೆಲ್ಲೆಡೆಯಿಂದ
ಕೋಟ್ಯಂತರ ಸಂಖ್ಯೆಯಲ್ಲಿ ಸಾಧು-ಸಂತರು, ಭಕ್ತರು ಆಗಮಿಸುತ್ತಿದ್ದಾರೆ. ಅತ್ಯಂತ ಶಾಂತಿ, ಸಂಯಮದಿಂದ ಪಾಲ್ಗೊಂಡು ಅವರವರ ಪೂಜಾ ಪದ್ದತಿಯಲ್ಲಿ ಧಾರ್ಮಿಕ ಉತ್ಸವ ಆಚರಿಸಿ ಅಭೂತಪೂರ್ವವಾಗಿ ಯಶಸ್ವಿಗೊಳಿಸುತ್ತಿದ್ದಾರೆ ಎಂದು ಸಚಿವ ಜೋಶಿ ಸಂತಸ ವ್ಯಕ್ತಪಡಿಸಿದರು.
ನಕಾರಾತ್ಮಕವಾಗಿ ಆಲೋಚನೆ ಮಾಡುವವರು ಅದೇ ರೀತಿ ಪ್ರತಿಕ್ರಿಯಿಸುವುದು ಸಾಮಾನ್ಯ. ಆದರೆ, ಇಲ್ಲಿ ಸಕಾರಾತ್ಮಕ ಶಕ್ತಿಯೇ ಹೆಚ್ಚಿದೆ. ಸನಾತನ ಹಿಂದೂ ಧರ್ಮದ ಪ್ರಬಲ ಶಕ್ತಿ ಎಂಥದ್ದು ಎಂಬುದನ್ನು ಈ ಮಹಾಕುಂಭ ಪ್ರದರ್ಶಿಸಿದೆ ಎಂದು ಸಚಿವ ಜೋಶಿ ಪ್ರತಿಪಾದಿಸಿದರು.