*ಅಣ್ಣಿಗೇರಿ,ಅಳ್ನಾವರ ಕ್ಷೇತ್ರ ಹೊಸದಾಗಿ ಅಸ್ಥಿತ್ವದ ಸಾಧ್ಯತೆ*/
*ಹು.ಧಾ.ಪೂರ್ವ ಮೀಸಲು ಬದಲು ನಿಕ್ಕಿ, ಸೆಂಟ್ರಲ್, ಕಲಘಟಗಿ ಎಸ್ಸಿ ಆಗುವ ಸಂಭವ* / *ಪಶ್ಚಿಮ ನವನಗರ ಕ್ಷೇತ್ರವಾಗಿ ಪರಿವರ್ತನೆ ಗುಸು ಗುಸು*
ಹುಬ್ಬಳ್ಳಿ : ಕ್ಷೇತ್ರ ಪುನರ್ವಿಂಗಡಣೆ ವಿಷಯ ದೊಡ್ಡ ಸದ್ದು ಮಾಡುತ್ತಿದ್ದು 2028ರಲ್ಲಿ ಇದು ಜಾರಿಯಾಗುವ ಸಾಧ್ಯತೆ ದಟ್ಟವಾಗಿದ್ದು ಧಾರವಾಡ ಜಿಲ್ಲೆಯಲ್ಲಿ ಪ್ರಸಕ್ತ ಇರುವ ಏಳು ವಿಧಾನ ಸಭಾ ಕ್ಷೇತ್ರಗಳು ಒಂಬತ್ತಾಗುವದು ನಿಶ್ಚಿತ ಎಂಬ ಮಾತುಗಳು ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಾಳೆಯಗಳಿಂದಲೂ ಕೇಳಿ ಬರಲಾರಂಭಿಸಿದ್ದು, ಆ ನಿಟ್ಟಿನಲ್ಲಿ ಹಾಲಿ ಶಾಸಕರು ಮತ್ತು ಭಾವಿ ಶಾಸಕರಾಗುವ ಕನಸು ಹೊಂದಿರುವ ಹಲವರು ತಮ್ಮದೇ ಲೆಕ್ಕಾಚಾರದಲ್ಲಿ ಕಾರ್ಯೋನ್ಮುಖರಾಗಿದ್ದಾರೆ.
ಪ್ರಸಕ್ತ ಹುಬ್ಬಳ್ಳಿ ಧಾರವಾಡ ಪೂರ್ವ( ಮೀಸಲು) , ಹುಬ್ಬಳ್ಳಿ ಧಾರವಾಡ ಸೆಂಟ್ರಲ್, ಹುಬ್ಬಳ್ಳೀ ಧಾರವಾಡ ಪಶ್ಚಿಮ, ಧಾರವಾಡ, ನವಲಗುಂದ, ಕುಂದಗೋಳ ಹಾಗೂ ಕಲಘಟಗಿ ಕ್ಷೇತ್ರಗಳು ಇದ್ದು ಇದಕ್ಕೆ ಮತ್ತೆರಡು ಕ್ಷೇತ್ರಗಳು ಸೇರ್ಪಡೆಯಾಗುವುದು ಬಹುತೇಕ ನಿಶ್ಚಿತವಾಗಿದೆ.
ಅಣ್ಣಿಗೇರಿ ಮತ್ತು ಅಳ್ನಾವರಗಳೆಂಬ ಎರಡು ಕ್ಷೇತ್ರಗಳು ಹೊಸದಾಗಿ ಅಲ್ಲದೇ ಹುಬ್ಬಳ್ಳಿ ಧಾರವಾಡ ಪಶ್ಚಿಮ ನವನಗರ ಕ್ಷೇತ್ರವಾಗಿ ಪರಿವರ್ತನೆಯಾಗುವುದೆಂಬ ಗುಸು ಗುಸು ಇದ್ದು, ಆ ನಿಟ್ಟಿನಲ್ಲಿ ಅನೇಕ ಆಕಾಂಕ್ಷಿಗಳ ಚಟುವಟಿಕೆ ಸದ್ದಿಲ್ಲದೇ ಆರಂಭವಾಗಿದೆ.
ಕಳೆದ ಬಾರಿ ಮೀಸಲಾಗಿದ್ದ ಹುಬ್ಬಳ್ಳಿ ಧಾರವಾಡ ಈ ಬಾರಿ ಸಾಮಾನ್ಯವಾಗುವುದು ನಿಕ್ಕಿಯಾಗಿದ್ದು, ಹು.ಧಾ.ಸೆಂಟ್ರಲ್ ಮತ್ತು ಕಲಘಟಗಿ ಕ್ಷೇತ್ರಗಳು ಮೀಸಲು ಕ್ಷೇತ್ರಗಳಾಗಿ ಮಾರ್ಪಡುವ ಸಾಧ್ಯತೆ ದಟ್ಟವಾಗಿದೆ. ಶೇ.33 ಮಹಿಳಾ ಮೀಸಲಾತಿ ಅನ್ವಯ ಒಂದು ಎಸ್ ಸಿ ಮಹಿಳೆ ಹಾಗೂ ಒಂದು ಸಾಮಾನ್ಯ ಮಹಿಳೆಯಾಗಿ ಪರಿವರ್ತನೆಯಾಗುವದು ಬಹುತೇಕ ನಿಚ್ಚಳವಾಗಿದೆ.
ಅಣ್ಣಿಗೇರಿ ಕ್ಷೇತ್ರಕ್ಕೆ ಹುಬ್ಬಳ್ಳಿ ತಾಲೂಕಿನ ಕೆಲ ಗ್ರಾಮಗಳು, ನವಲಗುಂದ ತಾಲೂಕಿನ ಕೆಲ ಜಿ.ಪಂ ಕ್ಷೇತ್ರಗಳು ಸೇರ್ಪಡೆಯಾಗಬಹುದೆನ್ನಲಾಗಿದ್ದು, ಅಳ್ನಾವರ ಕ್ಷೇತ್ರಕ್ಕೆ ಧಾರವಾಡ ತಾಲೂಕಿನ ನಾಲ್ಕು ಜಿ.ಪಂ.ಕ್ಷೇತ್ರಗಳು ಅಲ್ಲದೇ ಕಲಘಟಗಿ ಕ್ಷೇತ್ರದ ಕೆಲ ಪ್ರದೇಶ ಸೇರ್ಪಡೆಯಾಗಬಹುದೆನ್ನಲಾಗಿದೆ. ನೂತನ ನವನಗರ ಕ್ಷೇತ್ರಕ್ಕೆ ಹುಬ್ಬಳ್ಳಿ ತಾಲೂಕಿನ ಕಾರವಾರ ರಸ್ತೆಯ ಹಳ್ಳಿಗಳನ್ನೂ ಸಹ ಸೇರಿಸುವ ಯತ್ನ ನಡೆದಿದೆಯಲ್ಲದೇ ಪ್ರಸಕ್ತ ಧಾರವಾಡ ಕ್ಷೇತ್ರಕ್ಕೆ 1ರಿಂದ 20ರವರೆಗಿನ20 ವಾರ್ಡಗಳು ಸೇರ್ಪಡೆಗೊಳ್ಳಲಿವೆ ಎಂಬ ಮಾತುಗಳಿವೆ. ಪ್ರಸಕ್ತ ಧಾರವಾಡ ಕ್ಷೇತ್ರಕ್ಕೆ ಮಹಾನಗರ ಪಾಲಿಕೆ ವ್ಯಾಪ್ತಿಯ 9 ವಾರ್ಡಗಳೇ ಅಷ್ಟೇ ಇದೆ.
ಮೀಸಲು ಕ್ಷೇತ್ರ ಬದಲಾವಣೆಯಾದಲ್ಲಿ ಅಲ್ಲದೆ ಸಾಮಾನ್ಯ ಕ್ಷೇತ್ರ ಮೀಸಲಾಗಿ ಪರಿವರ್ತನೆಯಾದಲ್ಲಿ ಹಾಲಿ ಶಾಸಕರು ಪಕ್ಕದ ಅಥವಾ ಬೇರೆ ಕ್ಷೇತ್ರಗಳಿಗೆ ವಲಸೆ ಹೋಗುವ ಅನಿವಾರ್ಯತೆ ಎದುರಾಗಲಿದೆ.
ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಸಹಿತ ಕೆಲ ಹಿರಿಯ ಧುರೀಣರಿಗೆ ಕ್ಷೇತ್ರ ಪುನರವಿಂಗಡಣೆ ಬಗ್ಗೆ ಮಾಹಿತಿಯಿದ್ದು ಸದ್ದಿಲ್ಲದೇ ವಿಭಜನೆ ಕೆಲಸ ನಡೆದಿದ್ದು ಮುಂಬರುವ 2028ರ ವಿಧಾನಸಭಾ ಚುನಾವಣೆಗೆ ಇದನ್ನು ಅನುಷ್ಠಾನಗೊಳಿಸುವ ಪ್ರಕ್ರಿಯೆ ಮುಂದಿನ ದಿನಗಳಲ್ಲಿ ಇನ್ನಷ್ಟು ವೇಗ ಪಡೆಯಬಹುದು ಎನ್ನಲಾಗುತ್ತಿದೆ. ಅಲ್ಲದೆ ರಾಜ್ಯದ ವಿಧಾನಸಭಾ ಕ್ಷೇತ್ರಗಳು 290 ಕ್ಕಿಂತ ಹೆಚ್ಚಾಗುವ ಸಾಧ್ಯತೆಯಿದೆ.