*ಬಾಯಿ ಸುಡಲಿದೆ ನಂದಿನಿ ಹಾಲು, ಹೊಡೆಯಲಿದೆ ಕರೆಂಟ್ ಶಾಕ್*
ಬೆಂಗಳೂರು: ನಂದಿನಿ ಹಾಲು ಮತ್ತು ಮೊಸರಿನ ಮಾರಾಟ ದರ ಏಪ್ರಿಲ್ 1ರಿಂದ ಪ್ರತಿ ಲೀಟರ್ ಗೆ ₹4 ಹೆಚ್ಚಳ ಅಲ್ಲದೇ ಗೃಹ ಬಳಕೆಯ ವಿದ್ಯುತ್ ದರವೂ ತುಟ್ಟಿ ಯಾಗುವುದು ನಿಶ್ಚಿತವಾಗಿದೆ.
ದರ ಪರಿಷ್ಕರಿಸುವಂತೆ ಕರ್ನಾಟಕ ಹಾಲು ಮಹಾಮಂಡಳ ಸಲ್ಲಿಸಿದ್ದ ಪ್ರಸ್ತಾವಕ್ಕೆ ಸಚಿವ ಸಂಪುಟ ಸಭೆ ನಿನ್ನೆ ಒಪ್ಪಿಗೆ ನೀಡಿದ್ದು,
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್, ‘ಹೆಚ್ಚಳ ಮಾಡಿದ ಸಂಪೂರ್ಣ ಮೊತ್ತವನ್ನು ಹಾಲು ಉತ್ಪಾದಕರಿಗೆ ನೇರವಾಗಿ ನೀಡಲಾಗುವುದು’ ಎಂದರು.
ಸದ್ಯ ರೈತರಿಗೆ ಪ್ರತಿ ಲೀಟರ್ ಹಾಲು ಶೇಖರಣೆಗೆ ಕೆಎಂಎಫ್ ₹31.68 ದರ ನೀಡುತ್ತಿದೆ. ಹಾಲಿನ ಮಾರಾಟ ದರ ಪರಿಷ್ಕರಣೆಯ ನಂತರ ₹35.68 ಸಿಗಲಿದೆ. ‘2024ರ ಜೂನ್ 26ರಂದು ಪ್ರತಿ ಲೀಟರ್ ಹಾಲಿಗೆ ಹೆಚ್ಚುವರಿಯಾಗಿ 50 ಮಿಲಿಯಷ್ಟು ನೀಡಿ ದರವನ್ನು ₹2ರಂತೆ (₹42ರಿಂದ ₹44) ಹೆಚ್ಚಿಸಲಾಗಿತ್ತು. ಈ ಹೆಚ್ಚಳವನ್ನು ಹಿಂಪಡೆದು, ಮೊದಲಿದ್ದ ದರಕ್ಕೆ (₹42) ₹4 ಹೆಚ್ಚಿಸಲಾಗುವುದು’ ಎಂದು ಅವರು ತಿಳಿಸಿದರು. ಹಾಲು ಉತ್ಪಾದನೆ ಮತ್ತು ಸಂಸ್ಕರಣಾ ವೆಚ್ಚ ಪರಿಗಣಿಸಿ, ಹೈನೋದ್ಯಮಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ದರ ಪರಿಷ್ಕರಿಸುವಂತೆ ಹಾಲು ಒಕ್ಕೂಟಗಳೂ ಪ್ರಸ್ತಾವ ಸಲ್ಲಿಸಿದ್ದವು’ ಎಂದರು.
ಗೃಹ ಬಳಕೆ ವಿದ್ಯುತ್ ದರವನ್ನು ಏರಿಕೆ ಮಾಡಲು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ಸಿ) ಒಪ್ಪಿಗೆ ನೀಡಿದ್ದು, ಅದೂ ಏಪ್ರಿಲ್ 1ರಿಂದ ಪರಿಷ್ಕತ ದರ ಜಾರಿಗೆ ಬರಲಿದೆ.
ಗೃಹ ಬಳಕೆ ವಿದ್ಯುತ್ತಿನ ಪ್ರತಿ ಯೂನಿಟ್ ದರವನ್ನು ₹5.90ರಿಂದ ₹5.80ಕ್ಕೆ (10 ಪೈಸೆಗಳಷ್ಟು) ಇಳಿಕೆ ಮಾಡುತ್ತಿದ್ದೇವೆ’ ಎಂದು ಕೆಇಆರ್ಸಿ ಹೇಳಿದೆ. ಒಂದೆಡೆ, ಗ್ರಾಹಕರಿಗೆ ಮಂಜೂರಾದ ಕೆ.ವಿ ಸಾಮರ್ಥ್ಯ ಆಧರಿಸಿ ನಿಗದಿತ ಶುಲ್ಕವನ್ನು ವಿಪರೀತ ಹೆಚ್ಚಿಸಿದ್ದು (ಪ್ರತಿ ಕೆ.ವಿಗೆ ₹25 ಏರಿಕೆ), ಇನ್ನೊಂದೆಡೆ ಪಿಂಚಣಿ ಮತ್ತು ಗ್ರಾಚ್ಯುಟಿ ಹಣಕ್ಕೆ ಸಂಬಂಧಿಸಿದಂತೆ ಪ್ರತಿ ಯುನಿಟ್ಗೆ 36 ಪೈಸೆ ಶುಲ್ಕ ವಿಧಿಸಿದೆ. ಪರಿಣಾಮವಾಗಿ ವಿದ್ಯುತ್ ಬಳಕೆಯ ಶುಲ್ಕ ವಿಪರೀತ ಏರಿಕೆಯಾಗಲಿದೆ.
ಸದ್ಯ ಗೃಹಬಳಕೆ (ಎಲ್ಟಿ-1) ವಿದ್ಯುತ್ ಸಂಪರ್ಕದಲ್ಲಿ ಪ್ರತಿ ಕೆ.ವಿಗೆ ₹120 ನಿಗದಿತ ಶುಲ್ಕ ವಿಧಿಸಲಾಗುತ್ತಿತ್ತು. ಇದನ್ನು ₹145ಕ್ಕೆ ಹೆಚ್ಚಿಸಲಾಗಿದೆ.