ಮಳೆಯ ಅಬ್ಬರದಲ್ಲೆ ಹೊಸಪೇಟೆಯಲ್ಲಿ ಕಾಂಗ್ರೆಸ್ ಸರ್ಕಾರದ ಬೃಹತ್ ಸಮರ್ಪಣೆ ಸಮಾವೇಶ / 142 ಭರವಸೆ ಈಡೇರಿಕೆ : ಸಿಎಂ – 111111ಜನರಿಗೆ ಹಕ್ಕು ಪತ್ರ ವಿತರಣೆ / ಗ್ಯಾರಂಟಿ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ : ಡಿಸಿಎಂ*
ಹೊಸಪೇಟೆ : ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬಂದು ಇಂದಿಗೆ ಎರಡು ವರ್ಷ ಪೂರೈಸಿದ ಸಂಭ್ರಮದಂಗವಾಗಿ ಇಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಆಯೋಜಿಸಿದ್ದ ” ಪ್ರಗತಿಯತ್ತ ಕರ್ನಾಟಕ – ಸಮರ್ಪಣೆ ಸಂಕಲ್ಪ” ಬೃಹತ್ ಜನಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಸೇರಿದಂತೆ ಮುಂತಾದವರು ಕರುನಾಡ ಜನತೆಗೆ ಧನ್ಯವಾದ ಸಲ್ಲಿಸಿದರು.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾತನಾಡಿ,ಚುನಾವಣೆಯ ವೇಳೆ ನಾವು 5 ಭರವಸೆಗಳನ್ನು ಜನತೆಗೆ ನೀಡಿದ್ದೆವು, ಆದರೆ ಇಂದು ನಾವು 6 ಭರವಸೆಗಳನ್ನು ಈಡೇರಿಸಿದ್ದೇವೆ ಎಂದು ಹೇಳಿದರು.
ಒಂದು ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಅವರ ಭೂಮಿಯ ಮಾಲೀಕತ್ವದ ಹಕ್ಕು ನೀಡಲಾಗಿದೆ. ಇದು ಕರ್ನಾಟಕದ ಭವಿಷ್ಯಕ್ಕೆ ಅತ್ಯಂತ ಮುಖ್ಯವಾದ ಖಾತರಿಯಾಗಿದ್ದು, ಇದು ಕೋಟ್ಯಂತರ ಕುಟುಂಬಗಳಿಗೆ, ವಿಶೇಷವಾಗಿ ಬಡವರು, ದಲಿತರು ಮತ್ತು ಬುಡಕಟ್ಟು ಜನಾಂಗದವರಿಗೆ ನೇರವಾಗಿ ಪ್ರಯೋಜನವನ್ನು ನೀಡುತ್ತದೆ. ಭೂಮಿ ಹೊಂದಿರುವವರು ಮಾಲೀಕತ್ವದ ಹಕ್ಕನ್ನು ಪಡೆಯಬೇಕೆಂದು ನಾವು ಬಯಸುತ್ತೇವೆ ಏಕೆಂದರೆ ಅದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು, ಒಂದು ಲಕ್ಷ ಕುಟುಂಬಕ್ಕೆ ನಾವು ಅವರ ಆಸ್ತಿಗಳ ಹಕ್ಕು ವರ್ಗಾವಣೆ ಮಾಡಿದ್ದೇವೆ. ಇಂದಿರಾಗಾಂಧಿ ಅವರು ಕನಸು ಕೂಡಾ ಇದಾಗಿತ್ತು. ಅದನ್ನ ಇವತ್ತು ನನಸು ಮಾಡಿದ್ದೇವೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ ಚುನಾವಣೆ ವೇಳೆ ನಾವು ಕೊಟ್ಟಿದ್ದ ಭರವಸೆಗಳಲ್ಲಿ ಐದು ಗ್ಯಾರಂಟಿಗಳ ಜೊತೆಗೆ 142 ಭರವಸೆಗಳನ್ನು ಎರಡು ವರ್ಷಗಳಲ್ಲಿ ಪೂರೈಸಿದ್ದೇವೆ. ಮುಂದಿನ ಮೂರು ವರ್ಷಗಳಲ್ಲಿ ಉಳಿದ ಭರವಸೆ ಈಡೇರಿಸುತ್ತೇವೆ ಎಂದು ಭರವಸೆ ನೀಡಿದರು.
ಸಮಾವೇಶದಲ್ಲಿ 111111 ಮಂದಿಗೆ ಹಕ್ಕುಪತ್ರ ವಿತರಣೆ ಮಾಡಿ, ಉಕ್ಕಿನ ಮಹಿಳೆ ಇಂದಿರಾಗಾಂಧಿಯವರ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು
ಮೊದಲ ಬಾರಿ ಮುಖ್ಯಮಂತ್ರಿಯಾಗಿ ನಾವು ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದಲ್ಲದೆ, ಪ್ರಣಾಳಿಕೆಯಲ್ಲಿ ಘೋಷಿಸದ ಹೊಸದಾದ 30 ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸಿದ್ದೇವೆ ಎಂದರು.
ಬಿಜೆಪಿ ಏಕೆ ತಾನು ಕೊಟ್ಟಿದ್ದ ಭರವಸೆಗಳನ್ನು ಈಡೇರಿಸದೆ, ಜನರ ಎದುರು ಸುಳ್ಳು ಹೇಳಿಕೊಂಡು ತಿರುಗುತ್ತಿದೆ.ಕೇಂದ್ರ ಸರ್ಕಾರದಿಂದ ಪ್ರತೀ ವರ್ಷ ನಮಗೆ ನಷ್ಟ ಆಗುತ್ತಿದೆ. ನಾವು ಪ್ರತೀ ವರ್ಷ 4.5 ಲಕ್ಷ ಕೋಟಿ ತೆರಿಗೆ ರೂಪದಲ್ಲಿ ಕೊಟ್ಟರೆ ನಮಗೆ ವಾಪಾಸ್ ಬರುವುದು ಒಂದು ರೂಪಾಯಿಗೆ 14 ಪೈಸೆ ಮಾತ್ರ. ಇದರಿಂದ ಒಕ್ಕೂಟ ವ್ಯವಸ್ಥೆಯ ಘನತೆ ಹಾಳು ಮಾಡುತ್ತಿದ್ದಾರೆ ಎಂದರು.
ಹಿಂದಿನ ಬಿಜೆಪಿ ಸರ್ಕಾರದ ಮೇಲೆ 40% ಕಮಿಷನ್ ಆರೋಪ ಇತ್ತು. ನಾವು ಇದರ ವಿರುದ್ಧ ಹೋರಾಟ ಮಾಡಿದೆವು, ಅಧಿಕಾರಕ್ಕೆ ಬಂದ ಬಳಿಕ ತನಿಖೆಗೆ ನಾಗಮೋಹನ್ ದಾಸ್ ಸಮಿತಿ ರಚಿಸಿದೆವು. ಸಮಿತಿ ಕೊಟ್ಟಿರುವ ವರದಿಯಲ್ಲಿ ಕಮಿಷನ್ ವ್ಯವಹಾರ ಸಾಬೀತಾಗಿದೆ ಎಂದರು.
ರಾಜ್ಯದ ಜನತೆ ನಮ್ಮ ಮಾಲೀಕರು. ನಮ್ಮ ಮಾಲೀಕರಿಗೆ ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ನಿಮ್ಮ ಆಶೀರ್ವಾದ ಇರುವವರೆಗೂ ಬಿಜೆಪಿಯ ಸುಳ್ಳಿನ ರಾಶಿಗೆ ನಾವು ಹೆದರುವ, ಅಂಜುವ ಪ್ರಶ್ನೆಯೇ ಇಲ್ಲ ಎಂದರು.
ಎಲ್ಲಿಯವರೆಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುತ್ತದೋ, ಅಲ್ಲಿಯವರೆಗೂ ನಮ್ಮ ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿರುತ್ತವೆ. ಇದು ನಮ್ಮ ವಚನ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು.
ಎರಡು ವರ್ಷಗಳ ʼಸಮರ್ಪಣಾ ಸಂಕಲ್ಪʼ ಕೇವಲ ಸಂಭ್ರಮದ ಆಚರಣೆಯಲ್ಲ ನಮಗೆ ಆಶೀರ್ವದಿಸಿದ ಕನ್ನಡಿಗರ ಋಣ ತೀರಿಸುವ ಪ್ರತಿಜ್ಞೆ ಮಾಡಲು ಸೇರಿರುವ ವೇದಿಕೆ. ಐದು ಗ್ಯಾರಂಟಿಗಳನ್ನು ನೀಡಿ ಜನರ ಬದುಕನ್ನು ಹಸನು ಮಾಡಿ, ಈಗ ಕಂದಾಯ ಇಲಾಖೆಯ ಮೂಲಕ 6ನೇ ‘ಭೂ ಗ್ಯಾರಂಟಿʼ ನೀಡಿದ್ದೇವೆ. ಈ ಕಾರ್ಯಕ್ರಮ ರಾಜ್ಯದ ಇತಿಹಾಸದಲ್ಲಿ ಐತಿಹಾಸಿಕ ಪುಟಕ್ಕೆ ಸೇರಿದೆ. ಈವರೆಗೂ ನುಡಿದಂತೆ ನಡೆದಿದ್ದೇವೆ, ಮುಂದೆಯೂ ಕೊಟ್ಟ ಮಾತುಗಳನ್ನು ಉಳಿಸಿಕೊಳ್ಳುತ್ತೇವೆಯೆಂದರು.
ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಸರ್ಕಾರದ ಮುಖ್ಯಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ,
ಜಿಲ್ಲಾ ಉಸ್ತುವಾರಿ ಸಚಿವರಾದ ಜಮೀರ್ ಅಹ್ಮದ್ ಖಾನ್ ಅವರು ಸೇರಿದಂತೆ ಹಲವು ಮಂದಿ ಸಚಿವರು, ಶಾಸಕರು, ಹಿರಿಯ ನಾಯಕರು, ಗಣ್ಯರು ಉಪಸ್ಥಿತರಿದ್ದು, ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.