*ಅಭಿಮಾನಿಗಳಿಂದ ಅಭಿನಂದನಾ ಕಾರ್ಯಕ್ರಮ ಆಯೋಜನೆ*/ *ನಿವೃತ್ತ ಶಿಕ್ಷಕರು, ಸೈನಿಕರು, ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ*
ಧಾರವಾಡ : ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಉದ್ಯಮಿ ತವನಪ್ಪ ಪಾಯಪ್ಪ ಅಷ್ಟಗಿ ಅವರ ಜನ್ಮದಿನದ ಅಂಗವಾಗಿ ಅವರ ಅಭಿಮಾನಿ ಬಳಗ ಧಾರವಾಡದ ಗೌರಮ್ಮ ರಪಾಟಿ ಕಲ್ಯಾಣ ಮಂಟಪದಲ್ಲಿ ದಿ.6ರಂದು ಸೋಮವಾರ ಬೆಳಗ್ಗೆ 11-30 ಗಂಟೆಗೆ ವಿಭಿನ್ನ ಮಾದರಿಯಲ್ಲಿ ಅಭಿನಂದನಾ ಕಾರ್ಯಕ್ರಮ ಆಯೋಜಿಸುವ ಮೂಲಕ ಜನಮುಖಿಯಾಗಿಸಲು ಸಜ್ಜಾಗಿದ್ದಾರೆ.

ಧಾರವಾಡದ ಮುರುಘಾಮಠ, ಉಪ್ಪಿನ ಬೆಟಗೇರಿ, ಅಮ್ಮಿನಭಾವಿ, ಹೂಲಿ, ನಯಾನಗರ ಸೇರಿದಂತೆ ಅನೇಕ ಮಠಾಧೀಶರು, ಧಾರ್ಮಿಕ ಮುಖಂಡರು ಭಾಗವಹಿಸುವ ಕಾರ್ಯಕ್ರಮವನ್ನು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಉದ್ಘಾಟಿಸುವರು. ಮಾಜಿ, ಹಾಲಿ ಶಾಸಕರು, ರಾಜಕೀಯ ಗಣ್ಯರು ಹಾಗೂ ಅಭಿಮಾನಿಗಳು ಭಾಗವಹಿಸಲಿದ್ದಾರೆ.
ಸಮಾರಂಭದಲ್ಲಿ ನಿವೃತ್ತ ಶಿಕ್ಷಕರು, ಸೈನಿಕರ ಸನ್ಮಾನದ ಜೊತೆಗೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಗುತ್ತಿದೆ.
*ಸರ್ವ ಸಮಾಜಗಳ ಹಿತಚಿಂತಕ* : ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ತವನಪ್ಪ ಪಾಯಪ್ಪ ಅಷ್ಟಗಿ ಅವರು ಚಿರಪರಿಚಿತ ಮುಖಂಡರು. ರೈತ ಕುಟುಂಬದ ಹಿನ್ನೆಲೆಯ ಅವರು, ಕೃಷಿಕರಾಗಿ, ಉದ್ಯಮಿಯಾಗಿ, ವ್ಯಾಪಾರಸ್ಥರಾಗಿ ಗುರುತಿಸಿಕೊಂಡವರು.
ಗ್ರಾಮೀಣ ಭಾಗದ ಹಿರಿಯ ಮತ್ತು ಅನುಭವಿ ಮುಖಂಡರಾಗಿ ಅನೇಕ ಸಂಘ-ಸಂಸ್ಥೆಗಳ ಹುಟ್ಟು-ಬೆಳವಣಿಗೆಯಲ್ಲಿ ತೆರಮರೆಯಲ್ಲಿ ನಿಂತು ಪ್ರಮುಖ ಪಾತ್ರವಹಿಸಿದವರು. ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಅವಧಿ ಈ ಭಾಗದಲ್ಲಿ ಹಲವಾರು ಸಮಾಜಮುಖಿ ಕಾರ್ಯಗಳ ಮೂಲಕ ಜನಾನುರಾಗಿ ವ್ಯಕ್ತಿಯಾಗಿದ್ದಾರೆ.

ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಹಾಗೂ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜ ಸೇವಕರಾಗಿ ಜನಮನದಲ್ಲಿದ್ದಾರೆ. ಕಾಂಗ್ರೆಸ್ ಮುಖಂಡ ಧಾರವಾಡ ಗ್ರಾಮೀಣ ಭಾಗದಲ್ಲಿ ತವನಪ್ಪ ಅಷ್ಟಗಿ ಅವರು ತಮ್ಮದೇ ಆದ ಅಭಿಮಾನಿ ಬಳಗ ಹಾಗೂ ಆಪ್ತವಲಯವನ್ನು ಹೊಂದಿದ್ದು, ಜನರ ಪ್ರೀತಿ-ವಿಶ್ವಾಸ ಗಳಿಸುವಲ್ಲಿ ಯಶಸ್ಸು ಸಾಧಿಸಿದ್ದಾರೆ.



