ಹುಬ್ಬಳ್ಳಿ : ಪ್ರತ್ಯೇಕ ಧಾರವಾಡ ಪಾಲಿಕೆ ಹೋರಾಟ ತೀವ್ರಗೊಂಡಿರುವಾಗಲೇ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯನ್ನು ವಿಭಜಿಸುವ ರಾಜ್ಯ ಸರ್ಕಾರದ ಪ್ರಸ್ತಾವನೆಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಅಧಿಕೃತವಾಗಿ ಅಂಕಿತ ಹಾಕುವುದರೊಂದಿಗೆ ಧಾರವಾಡಿಗರ ಬಾಯಿಗೆ ಪೇಡೆ ಹಾಕಿದ್ದಾರೆ.
ಪ್ರತ್ಯೇಕ ಪಾಲಿಕೆ ಹೋರಾಟಕ್ಕೆ ಬಿಜೆಪಿ ಬೆಂಬಲಿಸಿ ಮೆರವಣಿಗೆ ನಡೆಸಿ ಪಾಲ್ಗೊಂಡ ಕೆಲ ಗಂಟೆಗಳಲ್ಲಿಯೇ ರಾಜ್ಯಪಾಲರ ಆದೇಶ ಹೊರ ಬಿದ್ದಿದ್ದು ವಿಶೇಷವಾಗಿದೆ. ಈ ಆದೇಶದಿಂದ ’ಹುಬ್ಬಳ್ಳಿ ಮಹಾನಗರ ಪಾಲಿಕೆ’ ಮತ್ತು ’ಧಾರವಾಡ ಮಹಾನಗರ ಪಾಲಿಕೆ’ ಎಂಬ ಎರಡು ಸ್ವತಂತ್ರ ಪಾಲಿಕೆ ಅಸ್ತಿತ್ವಕ್ಕೆ ಬರಲಿದೆ.

ಅಡಿಷನಲ್ ಸಾಲಿಸಿಟರ್ ಜನರಲ್ ಅವರ ಕಾನೂನು ಅಭಿಪ್ರಾಯ ಮತ್ತು ಸರ್ಕಾರದ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿದ ರಾಜ್ಯಪಾಲರು, ವಿಭಜನೆಗೆ ಒಪ್ಪಿಗೆ ಸೂಚಿಸಿದ್ದಾರೆ.
ಎರಡು ಹೊಸ ಪಾಲಿಕೆಗಳು ಆರ್ಥಿಕವಾಗಿ ಸದೃಢವಾಗಲು ಸರ್ಕಾರವು ಅಗತ್ಯ ಆರ್ಥಿಕ ನೆರವು ಮತ್ತು ಆದಾಯ ಹಂಚಿಕೆಯಲ್ಲಿ ಸಮಾನತೆಯನ್ನು ಕಾಯ್ದುಕೊಳ್ಳಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್. ಪ್ರಭುಶಂಕರ್ ಅವರು ಈ ಆದೇಶದ ಪ್ರತಿಯನ್ನು ನಗರಾಭಿವೃದ್ಧಿ ಇಲಾಖೆಗೆ ಮುಂದಿನ ಕ್ರಮಗಳಿಗಾಗಿ ರವಾನಿಸಿದ್ದಾರೆ.
ಸಂವಿಧಾನದ ವಿಧಿ 243U (1 ರ ಪ್ರಕಾರ, ಚುನಾಯಿತ ಸ್ಥಳೀಯ ಸಂಸ್ಥೆಗಳ ಅವಧಿಯು ಐದು ವರ್ಷಗಳವರೆಗೆ ಇದ್ದು ಹಾಲಿ ಇರುವ ಪಾಲಿಕೆಯ ಆಡಳಿತ ಮಂಡಳಿಯ ಅವಧಿ ಮುಗಿದ ನಂತರವೇ ವಿಭಜನೆಯ ಅಧಿಸೂಚನೆಯು ಜಾರಿಗೆ ಬರಲಿದೆ ಎಂದು ಹೇಳಲಾಗಿದೆ.
ಕಳೆದ ಹನ್ನೆರಡು ದಿನಗಳಿಂದ ಪ್ರತ್ಯೇಕ ಪಾಲಿಕೆಗಾಗಿ ಸತ್ಯಾಗ್ರಹ ನಡೆಯುತ್ತಿದ್ದು, ಇದರ ಕ್ರೆಡಿಟ್ ಗೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ತೀವ್ರ ಯತ್ನ ನಡೆಸಿವೆ. 30ರೊಳಗೆ ಅನುಮೋದನೆ ದೊರೆಯದಿದ್ದರೆ ಧಾರವಾಡ ಬಂದ್ ಗೆ ಸಹ ಸಿದ್ಧತೆ ನಡೆಸಿದ್ದರು.




