ಬೆಳಗಾವಿ : ತೀವ್ರ ಕುತೂಹಲ ಕೆರಳಿಸಿದ್ದ ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಆಗಿ ಬಿಜೆಪಿಯ ಮಂಗೇಶ ಪವಾರ್ ಮತ್ತು ಉಪಮೇಯರ್ ಆಗಿ ವಾಣಿ ವಿಲಾಸ ಜೋಶಿ ಆಯ್ಕೆಯಾಗಿದ್ದಾರೆ.
ಮಹಾಪೌರರಾಗಿ ಆಯ್ಕೆಯಾದ ಮಂಗೇಶ ಪವಾರ್ 41ನೇ ವಾರ್ಡಿನ ಸದಸ್ಯರು ಹಾಗೂ ಮರಾಠಿ ಭಾಷಿಕರು. ಉಪಮಹಾಪೌರರಾಗಿ ಆಯ್ಕೆಯಾದ ಕನ್ನಡ ಭಾಷಿಕ ವಾಣಿ ವಿಲಾಸ ಜೋಶಿ 43ನೇ ವಾರ್ಡಿನ ಸದಸ್ಯೆಯಾಗಿದ್ದಾರೆ.
ಮಹಾಪೌರ ಸ್ಥಾನಕ್ಕೆ ಮಂಗೇಶ ಹಾಗೂ ಬಸವಾರಾಜ ಮಧ್ಯೆ ಚುನಾವಣೆ ನಡೆಯಿತು. ಬಸವರಾಜ ಪರವಾಗಿ 20, ವಿರುದ್ಧವಾಗಿ 40 ಮತಗಳು ಬಂದವು.ಉಪಮಹಾಪೌರ ಸ್ಥಾನಕ್ಕೆ ವಾಣಿ ಪರವಾಗಿ 40 ಹಾಗೂ ವಿರುದ್ಧವಾಗಿ 19 ಮತಗಳು ಬಂದವು.
65 ಮತದಾರ ಪೈಕಿ 60 ಮಂದಿ ಹಾಜರಿದ್ದರು.ಸಚಿವರಾದ ಲಕ್ಷ್ಮೀ ಹೆಬ್ಬಾಳಕರ, ಸತೀಶ ಜಾರಕಿಹೊಳಿ, ಶಾಸಕ ಆಸಿಫ್ ಸೇಠ್, ಸಂಸದೆ ಪ್ರಿಯಾಂಕ ಜಾರಕಿಹೊಳಿ ಹಾಗೂ ಒಬ್ಬ ಪಾಲಿಕೆ ಸದಸ್ಯ ಗೈರು ಹಾಜರಾಗಿದ್ದರು.
ಪತ್ನಿಯ ಹೆಸರಿನಲ್ಲಿ ಪಾಲಿಕೆ ಪಡೆದ ವಿಚಾರದಲ್ಲಿ ಬೆಳಗಾವಿ ಪ್ರಾದೇಶಿಕ ಆಯುಕ್ತರು ಮಂಗೇಶ ಪವಾರ್ ಅವರ ಮಹಾನಗರ ಪಾಲಿಕೆ ಸದಸ್ಯತ್ವವನ್ನು ರದ್ದುಗೊಳಿಸಿದ್ದರು. ಇದನ್ನು ಪ್ರಶ್ನಿಸಿ ಮಂಗೇಶ ಪವಾರ್ ನ್ಯಾಯಾಲಯದ ಮೆಟ್ಟಿಲೇರಿ ತಡೆಯಾಜ್ಞೆ ತಂದಿದ್ದರು.ಈಗ ಅವರೇ ಕುಂದಾನಗರಿ ಪ್ರಥಮ ಪ್ರಜೆಯಾಗಿ ಆಯ್ಕೆ ಆಗಿದ್ದಾರೆ. ಉಪ ಮೇಯರ್ ವಾಣಿ ಜೋಶಿ ಹಿರಿಯ ಪತ್ರಕರ್ತ ವಿಲಾಸ ಜೋಶಿಯವರ ಪತ್ನಿ.