*ಹಿಂದುಳಿದ ಸಮುದಾಯಕ್ಕೆ ಸಿಕ್ಕ ಗೌರವ – 2028 ಕರ್ನಾಟಕ ಗೆಲುವೇ ಗುರಿ*
ಹುಬ್ಬಳ್ಳಿ: ಕಳೆದ ಜೂನ್ ತಿಂಗಳಲ್ಲಿ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದ ಹುಬ್ಬಳ್ಳಿ ಮೂಲದವರೆ ಆದ ಸಂಘ ನಿಷ್ಠ, ಬಿಜೆಪಿ ಕಚೇರಿ ನಿರ್ಮಾಣ ಸಮಿತಿ ಅಧ್ಯಕ್ಷರಾಗಿ ಅಹರ್ನಿಶಿ ಶ್ರಮಿಸಿದ್ದ ಮಾ. ನಾಗರಾಜ ಅವರಿಗೆ ಭಾರತೀಯ ಜನತಾ ಪಕ್ಷ ಮತ್ತೊಂದು ಬಂಪರ್ ಉಡುಗೊರೆ ನೀಡಿದ್ದು ರಾಷ್ಟ್ರೀಯ ಉಪಾಧ್ಯಕ್ಷರಾಗಿ ನಿಯುಕ್ತಿಗೊಂಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ, ಮಾಜಿ ಸಂಸದೆ ಸುಮಲತಾ ಅಂಬರೀಷರಂತವರನ್ನು ಹಿಂದಿಕ್ಕಿ ರಾಜ್ಯಸಭೆಗೆ ಬಲಗಾಲಿಟ್ಟಿದ್ದ ಮಾ. ನಾಗರಾಜ ಅವರಿಗೆ ಶ್ರಾವಣ ಸೋಮವಾರವೇ ಮತ್ತೊಂದು ಅದೃಷ್ಟ ಖುಲಾಯಿಸಿದೆ.
ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್ 13 ರಾಷ್ಟ್ರೀಯ ಉಪಾಧ್ಯಕ್ಷರನ್ನು ನೇಮಿಸಿದ್ದು ರಾಜಸ್ತಾನ ಮಾಜಿ ಸಿಎಂ ವಸುಂಧರಾ ರಾಜೇ ಸಿಂಧಿಯಾ, ಉತ್ತರಾಖಂಡದ ತೀರ್ಥ ರಾವತ್, ದಿಲ್ಲಿಯ ರಾಮ ಮಾಧವ, ಆಂದ್ರ ಪ್ರದೇಶದ ಡಾ. ಪುರಂದರೇಶ್ವರಿ, ಪಂಜಾಬಿನ ಮನಪ್ರೀತ್ ಸಿಂಗ್ , ಮುಂತಾದ ಘಟಾನುಘಟಿಗಳ ಪಟ್ಟಿಯಲ್ಲಿ ಕರ್ನಾಟಕದಿಂದ ಮಾನಾ ಅವರಿಗೆ ಅವಕಾಶ ಸಿಕ್ಕಿದೆ.

ಬಿವಿಬಿ ಇಂಜಿನೀಯರಿಂಗ್ ಕಾಲೇಜ್ ಪ್ರಾಧ್ಯಾಪಕರಾಗಿ ಅಲ್ಲದೇ ಎಬಿವಿಪಿ ವಿದ್ಯಾರ್ಥಿ ನಾಯಕರಾಗಿ ಗುರುತಿಸಿಕೊಂಡು ಕೆಪಿಎಸ್ಸಿ ಸದಸ್ಯರಾಗಿ, ಅಲ್ಲದೇ ಸಂಘದ ಪರಿವಾರದಲ್ಲಿ ತಮ್ಮದೇ ಆದ ಮಹತ್ವದ ಸ್ಥಾನ ಹೊಂದಿದ್ದ ನಾಗರಾಜ ಅವರು ಬಿಜೆಪಿ ಕಾರ್ಯಾಲಯ ಸ್ಥಾಪನೆ ಸಮಿತಿ ಅಧ್ಯಕ್ಷರಾಗಿ ಕಮಲ ಪಾಳೆಯದ ಕಚೇರಿ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿದ್ದು ಒಮ್ಮೆ ಪರಿಷತ್ ಚುನಾವಣೆಗೂ ಸ್ಪರ್ಧಿಸಿ ಪರಾಭವಗೊಂಡಿದ್ದರು. ಮಾ.ನಾಗರಾಜ ಅವರಿಗೆ ರಾಜ್ಯಸಭೆಯ ಸ್ಥಾನಕ್ಕೆ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಅಧಿಕಾರದಿಂದ ಕೆಳಗಿಳಿಸಿದ ಹಿನ್ನೆಲೆಯಲ್ಲಿ ಒಬಿಸಿ ಮತಗಳ ಮೇಲೆ ಕಣ್ಣಿಟ್ಟು, ಕುರುಬ ಸಮುದಾಯದ ಅವರಿಗೆ ಮತ್ತೆ ಮಣೆ ಹಾಕಿತ್ತು.
ಕರ್ನಾಟಕದ ಮೂರನೇ ಅತಿ ದೊಡ್ಡ ಸಮುದಾಯವಾಗಿರುವ ಕುರುಬ ಸಮಾಜಕ್ಕೆ ಸುಮಾರು 40 ವರ್ಷಗಳ ಬಳಿಕ ರಾಜ್ಯಸಭೆಯಲ್ಲಿ ದೊರಕಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಮಾನಾ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಕಂಡು ಕೃತಜ್ಞತೆ ಸಲ್ಲಿಸಿದ್ದ ಕೆಲವೆ ದಿನಗಳಲ್ಲಿ ರಾಷ್ಟ್ರದಾದ್ಯಂತ ಪಕ್ಷ ಸಂಘಟನೆ ಮಾಡುವ ಮತ್ತೊಂದು ಮಹತ್ವದ ಜವಾಬ್ದಾರಿ ಅವರ ಹೆಗಲೇರಿದೆ.
ನೂತನ ಪದಾಧಿಕಾರಿಗಳ ಪಟ್ಟಿಯಲ್ಲಿ 13 ರಾಷ್ಟ್ರೀಯ ಉಪಾಧ್ಯಕ್ಷರಲ್ಲದೇ 8 ರಾಷ್ಟ್ರೀಯ
ಪ್ರಧಾನ ಕಾರ್ಯದರ್ಶಿಗಳು, 18 ಕಾರ್ಯದರ್ಶಿಗಳು ಸೇರಿದಂತೆ 65ಹುದ್ದೆಗಳಿಗೆ ನೇಮಕ ಮಾಡಿದ್ದು ಕರ್ನಾಟಕದಿಂದ ಮಾ.ನಾಗರಾಜ ಹೊರತು ಪಡಿಸಿ ಈಗಾಗಲೇ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿರುವ ಬಿ.ಎಲ್.ಸಂತೋಷ ಮುಂದುವರಿದಿದ್ದು ಬೇರೆ ಯಾರೂ ಸ್ಥಾನ ಪಡೆದಿಲ್ಲವಾಗಿದೆ.
*ಹಿಂದುಳಿದ ವರ್ಗಕ್ಕೆ ಸಿಕ್ಕಿದ ಗೌರವ*
:ಹುಬ್ಬಳ್ಳಿಯ ಪಕ್ಷದ ಕಚೇರಿಯಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಮಾ.ನಾಗರಾಜ ಅವರು ತಮಗೆ ಈ ನೇಮಕ ತುಂಬಾ ಸಂತಸ ತಂದಿದೆ. ಇತ್ತೀಚೆಗೆ ರಾಜ್ಯಸಭೆಗೆ ನೇಮಕಗೊಂಡಿದ್ದೆ. ಇದು ಅನಿರೀಕ್ಷಿತವಾಗಿದೆ.
ಈ ಸಮಯದಲ್ಲಿ ನನಗೆ ಬಹಳಷ್ಟು ಸಂತೋಷವಾಗುತ್ತಿದೆ. ರಾಜ್ಯದ ಹಿಂದುಳಿದ ವರ್ಗಗಳಿಗೆ ಈ ಜವಾಬ್ದಾರಿ ಸಿಕ್ಕಿದೆ ಎಂದು ಭಾವಿಸುವೆ ಎಂದು ಸಂತಸ ವ್ಯಕ್ತಪಡಿಸಿದರು.
ಎಲ್ಲಾ ಜನಾಂಗದ ಪರವಾಗಿ ನಾನು ರಾಷ್ಟ್ರೀಯ ಅಧ್ಯಕ್ಷರು, ಪ್ರಧಾನಿ ನರೇಂದ್ರ ಮೋದಿ , ಗೃಹ ಸಚಿವ ಅಮಿತ್ ಶಾ ಅವರಿಗೆ
ರಾಷ್ಟ್ರೀಯ ಸಂಘಟನೆ ಕಾರ್ಯದರ್ಶಿ ಬಿಎಲ್ ಸಂತೋಷ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೂ ಧನ್ಯವಾದ ಅರ್ಪಿಸಿದರು.
2028ರ ಕರ್ನಾಟಕ ಚುನಾವಣೆ ಗೆಲ್ಲುವುದು ನಮ್ಮ ಗುರಿಯಾಗಿದ್ದು, ಬಳಿಕ ಮೋದಿ _04ನಮ್ಮ ಟಾರ್ಗೆಟ್ ಎಂದ ಅವರು 2028ಕ್ಕೆ ಕರ್ನಾಟಕದಲ್ಲಿ ಮತ್ತೆ ಕೇಸರಿ ಬಾವುಟ ಹಾರುವುದು ನಿಶ್ಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ , ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಮಾಡುವುದಾಗಿ ಹೇಳಿದ ಅವರು ಎಲ್ಲಾ ಸಮುದಾಯದವರು ಬಿಜೆಪಿ ಆಯ್ಕೆ ಮಾಡುವ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಹೇಳಿದರು.
ನಾನು ಎಂದಿಗೂ ಅಧಿಕಾರಕ್ಕೆ ಆಸೆ ಪಟ್ಟವನಲ್ಲ. ಪಕ್ಷದ ಮುಖಂಡರು ನೀಡುವ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ್ದೇನೆ.ಈಗಲೂ ಬದ್ಧನಾಗಿ ಕೆಲಸ ಮಾಡುವೆ ಎಂದರು.



