ಹೊಸದಿಲ್ಲಿ: ಕರ್ನಾಟಕದ ಧಾರವಾಡ ಐಐಟಿ ಸೇರಿದಂತೆ ದೇಶದ 5 ಐಐಟಿಗಳಲ್ಲಿ ₹ 11,828.79 ಕೋಟಿ ವೆಚ್ಚದಲ್ಲಿ ಶೈಕ್ಷಣಿಕ ಮತ್ತು ಮೂಲಸೌಕರ್ಯ ಸಾಮರ್ಥ್ಯ ವಿಸ್ತರಣೆಗೆ ಕೇಂದ್ರ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ರಾಜ್ಯದ ಧಾರವಾಡ ಐಐಟಿ ಹಾಗೂ ಆಂಧ್ರಪ್ರದೇಶ ತಿರುಪತಿ ಐಐಟಿ, ಛತ್ತೀಸ್ಗಢದ ಭಿಲಾಯಿ ಐಐಟಿ, ಜಮ್ಮು-ಕಾಶ್ಮೀರದ ಜಮ್ಮು ಐಐಟಿ ಮತ್ತು ಕೇರಳದ ಪಾಲಕ್ಕಾಡ್ಗಳಲ್ಲಿ ಸ್ಥಾಪಿಸಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆಗಳ (ಐಐಟಿ) ಶೈಕ್ಷಣಿಕ ಮತ್ತು ಮೂಲಸೌಕರ್ಯ ಸಾಮರ್ಥ್ಯ ವಿಸ್ತರಣೆಗೆ ಅನುಮೋದನೆ ನೀಡಿತು ಎಂದಿದ್ದಾರೆ.
ಈ ಐದು ಪ್ರಮುಖ ಐಐಟಿಗಳಲ್ಲಿ 6500ಕ್ಕೂ ಹೆಚ್ಚು ವಿದ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲವಾಗುವಂತೆ ಸೌಲಭ್ಯಗಳ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೇ, ಕೈಗಾರಿಕೆ-ಶೈಕ್ಷಣಿಕ ಸಂಪರ್ಕವನ್ನು ಬಲಪಡಿಸಲು ಐದು ಹೊಸ ಅತ್ಯಾಧುನಿಕ ಸಂಶೋಧನಾ ಪಾರ್ಕ್ಗಳು ಸಹ ಈ ಯೋಜನೆಯಲ್ಲಿ ಬರಲಿವೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸ್ಥಾಪಿಸಲಾದ ಐದು ಹೊಸ ಐಐಟಿಗಳ ಅಭಿವೃದ್ಧಿಗೆ “ಬಿʼ ಹಂತದ ಯೋಜನೆ ಇದಾಗಿದ್ದು, ಕೇಂದ್ರ ಸಂಪುಟದಿಂದ ಅನುಮೋದನೆಗೊಂಡಿತು ಎಂದು ಹೇಳಿದ್ದಾರೆ.
2025-26ರಿಂದ 2028-29ರವರೆಗಿನ ನಾಲ್ಕು ವರ್ಷಗಳ ಅವಧಿಯಲ್ಲಿ ಒಟ್ಟು ₹ 11,828.79 ಕೋಟಿ ವೆಚ್ಚದಲ್ಲಿ ಈ ಐಐಟಿಗಳಲ್ಲಿ ಅಭಿವೃದ್ಧಿ ಯೋಜನೆ ಕೈಗೊಳ್ಳಲಾಗುತ್ತಿದ್ದು, 130 ಅಧ್ಯಾಪಕರ ಹುದ್ದೆಗಳನ್ನು (ಪ್ರೊಫೆಸರ್ ಮಟ್ಟದಲ್ಲಿ ಅಂದರೆ ಹಂತ 14 ಮತ್ತು ಅದಕ್ಕಿಂತ ಹೆಚ್ಚಿನ) ಸೃಷ್ಟಿಸಲು ಸಂಪುಟ ಅನುಮೋದಿಸಿದೆ ಎಂದು ತಿಳಿಸಿದ್ದಾರೆ.
ಕೇಂದ್ರ ಸಚಿವ ಸಂಪುಟ ಐಐಟಿಗಳ ಅಭಿವೃದ್ಧಿ ಮತ್ತು ಸಾಮರ್ಥ್ಯ ವಿಸ್ತರಣೆಗೆ ಕೈಗೊಂಡ ಈ ನಿರ್ಣಯ, ಕೌಶಲ್ಯಪೂರ್ಣ ಕಾರ್ಯಪಡೆಯನ್ನು ಸೃಷ್ಟಿಸುತ್ತದೆ. ನಾವೀನ್ಯತೆಗೆ ಚಾಲನೆ ನೀಡುವ ಮೂಲಕ ಮತ್ತು ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುವ ಮೂಲಕ ರಾಷ್ಟ್ರ ನಿರ್ಮಾಣವನ್ನು ಉತ್ತೇಜಿಸುತ್ತದೆ. ಇದು ಸಾಮಾಜಿಕ ಚಲನಶೀಲತೆಯನ್ನು ಹೆಚ್ಚಿಸುತ್ತದೆ. ಶೈಕ್ಷಣಿಕ ಅಸಮಾನತೆಯನ್ನು ಕಡಿಮೆ ಮಾಡುತ್ತದೆ ಮತ್ತು ಭಾರತದ ಜಾಗತಿಕ ಸ್ಥಾನವನ್ನು ಬಲಪಡಿಸುತ್ತದೆ ಎಂದು ಜೋಶಿ ಹೇಳಿದ್ದಾರೆ.