*ಅವಳಿನಗರದಲ್ಲಿ ಬಹುಸಂಖ್ಯಾತರಿಗೆ ಮಣೆ*
ಹುಬ್ಬಳ್ಳಿ : ರಾಜ್ಯದ ಎಲ್ಲಾ 35 ಜಿಲ್ಲಾ ಕಾಂಗ್ರೆಸ್ ಸಮಿತಿಗಳಿಗೆ ಅಧ್ಯಕ್ಷರನ್ನು ‘ಸಂಘಟನ್ ಸೃಜನ್ ಅಭಿಯಾನ’ ಪ್ರಕ್ರಿಯೆ ನಡೆದಿದ್ದು ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲೆಗೆ ರಾಜ್ಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸದಾನಂದ ಡಂಗನವರ ಹಾಗೂ ಧಾರವಾಡ ಗ್ರಾಮೀಣ ಜಿಲ್ಲಾ ಅಧ್ಯಕ್ಷರಾಗಿ ಕುಂದಗೋಳದ ಕಮಡೊಳ್ಳಿಯ ಮಾಜಿ ಶಾಸಕ ದಿ. ಗೋವಿಂದಪ್ಪ ಜುಟ್ಟಲ ಅವರ ಪುತ್ರ , ಗ್ರಾಮೀಣ ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ ಚಂದ್ರಶೇಖರ ಜುಟ್ಟಲ ನಿಯುಕ್ತಿಗೊಂಡಿದ್ದಾರೆ.

ಉಭಯ ಜಿಲ್ಲೆಗಳಿಗೆ ವೀಕ್ಷಕರಾಗಿ ನೇಮಕಗೊಂಡಿದ್ದ ಹೈದ್ರಾಬಾದ್ ಮೂಲದ ಹಿರಿಯ ಮುಖಂಡ ಅಜ್ಮತುಲ್ಲಾ ಹುಸೇನಿ ಅವರು ಕಳೆದ ತಿಂಗಳು ಆಗಮಿಸಿ ಸಮಗ್ರ ವಿವರ ಸಂಗ್ರಹಿಸಿ ನೀಡಿದ ವರದಿಯನ್ವಯ ಎರಡೂ ಜಿಲ್ಲೆಗಳ ನೂತನ ಅಧ್ಯಕ್ಷರ ನೇಮಕಗೊಂಡಿದೆ.
ಕಳೆದ ಒಂಬತ್ತು ವರ್ಷಗಳಿಂದ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅಲ್ತಾಫ್ ಹಳ್ಳೂರ ಸ್ಥಾನದಲ್ಲಿ ವಾಯುವ್ಯ ಸಾರಿಗೆ ಮಾಜಿ ಅಧ್ಯಕ್ಷ ಡಂಗನವರ ನಿಯುಕ್ತಿಗೊಂಡಿದ್ದು, ಎಂಟು ವರ್ಷಗಳಿಂದ ಗ್ರಾಮೀಣ ಅಧ್ಯಕ್ಷರಾಗಿದ್ದ ಅನಿಲಕುಮಾರ ಪಾಟೀಲ ಬದಲಿಗೆ ಜುಟ್ಟಲ ನೇಮಕಗೊಂಡಿದ್ದಾರೆ.
ಈ ಬಾರಿ ಅವಳಿನಗರ ಅಧ್ಯಕ್ಷ ಸ್ಥಾನ ಅಲ್ಪಸಂಖ್ಯಾತರನ್ನು ಬಿಟ್ಟು ಬಹುಸಂಖ್ಯಾತರಿಗೆ ನೀಡುವರೆಂಬ ಗುಸು ಗುಸು ನಿಜವಾಗಿದ್ದು, ಗ್ರಾಮೀಣದಲ್ಲಿ ಬಹುಸಂಖ್ಯಾತರ ಬದಲು ಪರಿಶಿಷ್ಠ ಪಂಗಡದವರಿಗೆ ನೀಡಲಾಗಿದೆ. ಈಗಾಗಲೇ ಪಕ್ಷ ಸಂಘಟನೆಯಲ್ಲಿ ಯುವಕರಿಗೆ ಹೆಚ್ಚು ಆದ್ಯತೆ ನೀಡಬೇಕೆಂಬ ನಿಟ್ಟಿನಲ್ಲಿ ಇದು ಬಹುದೊಡ್ಡ ಬದಲಾವಣೆಯಾಗಿದೆ.

ಹಾವೇರಿ ಜಿಲ್ಲಾ ಅಧ್ಯಕ್ಷರಾಗಿ ಸಂಜೀವ ಕುಮಾರ ನೀರಲಗಿ, ಗದಗ ಅಧ್ಯಕ್ಷರಾಗಿ ವಾಸಣ್ಣ ಕುರಡಗಿ ಹಾಗೂ ಉತ್ತರ ಕನ್ನಡ ಅಧ್ಯಕ್ಷರಾಗಿ ಗಜಾನನ ನಾಯ್ಕ ಆಯ್ಕೆಯಾಗಿದ್ದಾರೆ.



