ಧಾರವಾಡ : ಇಲ್ಲಿನ ದಿ. ಗೌರ್ನಮೆಂಟ್ ಎಂಪ್ಲಾಯೀಜ್-ಆಪರೇಟಿವ್ ಬ್ಯಾಂಕ್ನ ಆಡಳಿತ ಮಂಡಳಿಗೆ ನಡೆದ ಚುನಾವಣೆಯನ್ನು ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ದಾವಾ ಪಂಚಾಯ್ತಿ ನ್ಯಾಯಾಲಯವು ರದ್ದುಗೊಳಿಸಿ ಆದೇಶಿಸಿದೆ.

ಬ್ಯಾಂಕಿನ ಆಡಳಿತ ಮಂಡಳಿಗೆ ದಿ.30-12-2023ರಂದು ಜರುಗಿದ ಚುನಾವಣೆ ನಡೆಸುವ ಸಂದರ್ಭದಲ್ಲಿ ಅಂತಿಮ ಅರ್ಹ ಮತದಾರರ ಪಟ್ಟಿಯ ವಿಷಯಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ಅರ್ಜಿಯನ್ನು ಪಂಚಾಯ್ತಿ ಪುರಸ್ಕರಿಸಿ ಈ ಆದೇಶ ನೀಡಿದೆ.
ಧಾರವಾಡದ ಅಸ್ಕರಲಿ ಆರ್. ಹಿರೇಮನಿ ಎಂಬ ನೌಕರರು ಚುನಾವಣಾ ಪ್ರಕ್ರಿಯೆ ಪ್ರಶ್ನಿಸಿ ದಾವಾ ಪಂಚಾಯ್ತಿ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ ದಾವಾ ಪಂಚಾಯ್ತಿ ನ್ಯಾಯಾಲಯದ ಸಹಕಾರ ಸಂಘಗಳ ಅಪರ ನಿಬಂಧಕರಾದ ಎಚ್.ವೈ.ಗದ್ದನಕೇರಿ ಅವರು, ಬ್ಯಾಂಕಿನ ಆಡಳಿತ ಮಂಡಳಿಗೆ ನಡೆದ ಚುನಾವಣಾ ಫಲಿತಾಂಶವನ್ನು ರದ್ದುಗೊಳಿಸಿ ಕಳೆದ ದಿ.24 ರಂದು ಆದೇಶ ನೀಡಿದ್ದಾರೆ. ಅರ್ಹ ಅಂತಿಮ ಮತದಾರರ ಪಟ್ಟಿಯನ್ನು ಹೊಸದಾಗಿ ಸಿದ್ಧಪಡಿಸುವ ಹಂತದಿಂದ ಪುನಃ ಚುನಾವಣೆ ನಡೆಸುವಂತೆ ರಿಟರ್ನಿಂಗ್ ಆಫೀಸರಿಗೆ ಸೂಚಿಸಿದ್ದಾರೆ. ಅರ್ಜಿದಾರರ ಪರ ನ್ಯಾಯವಾದಿ ಬಸವರಾಜ ದಲಾಲ ವಕಾಲತ್ತು ವಹಿಸಿದ್ದರು.
ಸದರಿ ಆದೇಶದಿಂದ ಜಿ.ವಿ.ದಿನಮಣಿ ಅವರ ನೇತೃತ್ವದಲ್ಲಿನ ಹಾಲಿ ಆಡಳಿತ ಮಂಡಳಿ ಅಧಿಕಾರ ಕಳೆದಕೊಂಡಂತಾಗಿದೆ. ೧೯೨೦ ರಲ್ಲಿ ಸಹಕಾರ ವಲಯದಲ್ಲಿ ಸ್ಥಾಪನೆಯಾಗಿ, ಸರಕಾರಿ ನೌಕರರ ಸದಸ್ಯತ್ವ ಹೊಂದಿರುವ ಬ್ಯಾಂಕ್ ಶತಮಾನ ಪೂರೈಸಿದೆ.ಬ್ಯಾಂಕಿನ ವಹಿವಾಟು ಈಗ ಕೋಟಿಗಟ್ಟಲೇ ತಲುಪಿದೆ. ಅವಿಭಜಿತ ಧಾರವಾಡ ಜಿಲ್ಲೆಯ ವ್ಯಾಪ್ತಿ ಹೊಂದಿರುವ ಬ್ಯಾಂಕಿನ ಚುಕ್ಕಾಣಿ ಹಿಡಿಯಲು ತೀವ್ರ ಪೈಪೋಟಿ ನಡೆಯುತ್ತಿದೆ.
ಆದರೆ, ಬ್ಯಾಂಕಿನ ಅಧಿಕಾರ ಹಿಡಿಯುವ ಭರದಲ್ಲಿ ನಡೆಯುವ ನಿಯಮಬಾಹಿರ ಕಾರ್ಯಗಳಿಂದ ಇದೀಗ ಆಡಳಿತ ಮಂಡಳಿಯ ಫಲಿತಾಂಶ ರದ್ದಾಗಿದೆ.
ಪಟ್ಟಣ ಸಹಕಾರ ಬ್ಯಾಂಕುಗಳ ಚುನಾವಣೆಗೆ ಸಂಬಂಧಿಸಿದ ಸಹಕಾರ ನಿಯಮಗಳಿಗೆ ತಿದ್ದುಪಡಿ ತಂದ ಐದು ವರ್ಷಗಳ ಬಳಿಕ ಇಂಥದ್ದೊಂದು ಆದೇಶ ಪಡೆದ ಮೊದಲ ಬ್ಯಾಂಕ್ ಎಂಬ ಪಟ್ಟಿಗೆ ಈಗ ಈ ಬ್ಯಾಂಕ್ ಸೇರಿದೆ.




