ಧಾರವಾಡ: ತೀವ್ರ ಕುತೂಹಲ ಮತ್ತು ಪ್ರತಿಷ್ಠೆಯ ಕಣವಾಗಿದ್ದ ಧಾರವಾಡ ಹಾಲು ಒಕ್ಕೂಟದ (ಕೆಎಂಎಫ್) ಕಾನೂನು ಹೋರಾಟದಲ್ಲಿ ಶ್ರೀಮತಿ ಶಿವಲೀಲಾ ಕುಲಕರ್ಣಿ ಅವರಿಗೆ ಮಹತ್ವದ ಗೆಲುವು ಲಭಿಸಿದೆ.
ಶಂಕರ್ ಮುಗದ ಅವರು ಸಲ್ಲಿಸಿದ್ದ ಅರ್ಜಿಯನ್ನು ಉಚ್ಚ ನ್ಯಾಯಾಲಯವು ವಜಾಗೊಳಿಸಿ ಮಹತ್ವದ ತೀರ್ಪು ನೀಡಿದ್ದು, ಇದರ ಬೆನ್ನಲ್ಲೇ ಕೆಎಂಎಫ್ ಅಧ್ಯಕ್ಷ ಸ್ಥಾನದಿಂದ ಶಂಕರ್ ಮುಗದ ಅವರನ್ನು ವಜಾಗೊಳಿಸಲಾಗಿದೆ.
ಪ್ರಕರಣದ ಹಿನ್ನೆಲೆ : ಶಿವಳ್ಳಿಯ ಹಾಲು ಉತ್ಪಾದಕರ ಸಹಕಾರಿ ಸಂಘವು ಸೂಪರ್ ಸೀಡ್ (Supersede) ಆಗಿದ್ದರೂ ಸಹ, ಶಂಕರ್ ಮುಗದ ಅವರು ನಿಯಮಬಾಹಿರವಾಗಿ ಒಕ್ಕೂಟದ ನಿರ್ದೇಶಕ ಹಾಗೂ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿದಿದ್ದರು. ಈ ಅಕ್ರಮ ಮತ್ತು ನಿಯಮ ಉಲ್ಲಂಘನೆಯನ್ನು ಪ್ರಶ್ನಿಸಿ ಶಿವಲೀಲಾ ಕುಲಕರ್ಣಿ ಅವರು ಕಾನೂನು ಹೋರಾಟ ಆರಂಭಿಸಿದ್ದರು.

ರಾಜಕೀಯ ಹಾಗೂ ಸಹಕಾರಿ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಈ ಪ್ರಕರಣವು ಹೈಕೋರ್ಟ್ ಮೆಟ್ಟಿಲೇರಿತ್ತು. ಸುದೀರ್ಘ ವಿಚಾರಣೆ ನಡೆಸಿದ ಉಚ್ಚ ನ್ಯಾಯಾಲಯವು, ಸೂಪರ್ ಸೀಡ್ ಆದ ಸಂಘದ ಪ್ರತಿನಿಧಿಯಾಗಿ ಅಧಿಕಾರದಲ್ಲಿ ಮುಂದುವರಿಯುವುದು ಕಾನೂನುಬಾಹಿರ ಎಂದು ಅಭಿಪ್ರಾಯಪಟ್ಟು, ಶಂಕರ್ ಮುಗದ ಅವರ ಅರ್ಜಿಯನ್ನು ತಿರಸ್ಕರಿಸಿದೆ.
ನ್ಯಾಯಾಲಯದ ಈ ಆದೇಶದಿಂದಾಗಿ ಶಂಕರ್ ಮುಗದ ಅವರು ಕೆಎಂಎಫ್ ಅಧ್ಯಕ್ಷ ಹಾಗೂ ನಿರ್ದೇಶಕ ಸ್ಥಾನವನ್ನು ಕಳೆದುಕೊಂಡಿದ್ದಾರೆ. “ಈ ತೀರ್ಪು ಸತ್ಯ ಮತ್ತು ನ್ಯಾಯಕ್ಕೆ ಸಂದ ಜಯವಾಗಿದೆ” ಎಂದು ಶಿವಲೀಲಾ ಕುಲಕರ್ಣಿ ಅವರ ಬೆಂಬಲಿಗರು ಹಾಗೂ ಹಾಲು ಉತ್ಪಾದಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಸಂಭ್ರಮಾಚರಣೆ: ತೀರ್ಪು ಹೊರಬೀಳುತ್ತಿದ್ದಂತೆಯೇ ಮುಖಂಡರು ಹಾಗೂ ಕಾರ್ಯಕರ್ತರು ಶ್ರೀಮತಿ ಶಿವಲೀಲಾ ವಿನಯ ಕುಲಕರ್ಣಿ ಅವರಿಗೆ ಸಿಹಿ ತಿನ್ನಿಸಿ ಸಂಭ್ರಮ ಆಚರಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಅರವಿಂದ ಏಗನಗೌಡರ, ಚನ್ನಬಸಪ್ಪ ಮಟ್ಟಿ, ಪ್ರಕಾಶ ಘಾಟಗೆ, ಸಿದ್ದಣ್ಣ ಪ್ಯಾಟಿ, ಜಯಣ್ಣ ಮುದ್ದಿ, ಮಂಜೂರು ಅಲಿ, ಚಿದಾನಂದ ಚಂದರಗಿ, ಅರ್ಜುನ್ ಪತ್ರೆನ್ನವರ, ಇಬ್ರಾಹಿಂ ಗುಡಸಲಮನಿ, ಮುರುಗೇಶ್ ಧನಶೆಟ್ಟಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.



