ಬೆಂಗಳೂರು ನಗರದ ನೂತನ ‘ಮುಖ್ಯ ಪೊಲೀಸ್ ಕಮಿಷನರ್’ ಆಗಿ ಆರ್. ಹಿತೇಂದ್ರ , ಲಾಬೂರಾಮ್ ಸೆಂಟ್ರಲ್ ಕಮೀಷನರ್, ಶಶಿಕುಮಾರ್ ಮಂಗಳೂರು ಐಜಿಪಿ**
ಬೆಂಗಳೂರು : ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಯಲ್ಲಿ ಆಡಳಿತಾತ್ಮಕ ಬದಲಾವಣೆ ತಂದಿದ್ದು, ಹಿರಿಯ ಹಾಗೂ ಕಿರಿಯ ಮಟ್ಟದ 32 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಅಲ್ಲದೆ ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಐದು ವಲಯವಾರು ಹೊಸ ಆಯುಕ್ತರ ಹುದ್ದೆಗಳನ್ನು ಸೃಷ್ಟಿಸಿದೆ.

ಬೆಂಗಳೂರು ನಗರದ ನೂತನ ‘ಮುಖ್ಯ ಪೊಲೀಸ್ ಕಮಿಷನರ್’ ಆಗಿ ಎಡಿಜಿಪಿ ಆರ್.ಹಿತೇಂದ್ರ ಅವರನ್ನು ನೇಮಿಸಲಾಗಿದೆ. ನಗರ ಕಮಿಷನರ್ ಆಗಿದ್ದ ಸೀಮಾಂತ್ ಕುಮಾರ್ ಸಿಂಗ್ ಅವರನ್ನು ಅಗ್ನಿಶಾಮಕ ದಳ ಹಾಗೂ ತುರ್ತು ಸೇವಾ ವಿಭಾಗದ ಎಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ರಚನೆಯಾಗಿರುವ ಹಿನ್ನೆಲೆಯಲ್ಲಿ ಐದು ಪ್ರತ್ಯೇಕ ಪೊಲೀಸ್ ಕಮಿಷನರೇಟ್ಗಳ ರಚನೆ ಮಾಡಲಾಗಿದೆ.ಇನ್ನು ಹೊಸದಾಗಿ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಮತ್ತು ಕೇಂದ್ರ ಎಂಬ ಐದು ಪ್ರತ್ಯೇಕ ಪೊಲೀಸ್ ಕಮಿಷನರೇಟ್ಗಳನ್ನು ವಿಭಜಿಸಿ ಪುನರ್ ರಚಿಸಲಾಗಿದೆ.
ಕೇಂದ್ರ ವಿಭಾಗದ ಪೊಲೀಸ್ ಕಮಿಷನರ್ ಆಗಿ ಲಾಬೂ ರಾಮ್, ಪೂರ್ವ ವಿಭಾಗದ ಕಮಿಷನರ್ ಆಗಿ ಪಿ.ಎಸ್.ಹರ್ಷ, ಪಶ್ಚಿಮ ವಿಭಾಗದ ಪೊಲೀಸ್ ಕಮಿಷನರ್ ಆಗಿ ವಿಕಾಸ್ ಕುಮಾರ್ ವಿಕಾಸ್, ಉತ್ತರ ವಿಭಾಗದ ಪೊಲೀಸ್ ಕಮಿಷನರ್ ಆಗಿ ಎಂ.ಬಿ.ಬೋರಲಿಂಗಯ್ಯ, ದಕ್ಷಿಣ ವಿಭಾಗದ ನೂತನ ಕಮಿಷನರ್ ಆಗಿ ವಂಶಿ ಕೃಷ್ಣ ಅವರನ್ನು ನೇಮಿಸಲಾಗಿದೆ.
ಹೇಮಂತ್ ಎಂ. ನಿಂಬಾಳ್ಳರ್ ಅವರನ್ನು ನೂತನವಾಗಿ ರಚಿಸಿರುವ ರೌಡಿ ನಿಗ್ರಹ ಪಡೆಯ ಕಮಿಷನರ್ ಆಗಿ ನೇಮಿಸಲಾಗಿದೆ. ಬಿಜಯ್ ಕುಮಾರ್ ಸಿಂಗ್, ಎಸ್.ಮುರುಗನ್, ಮನೀಶ್ ಕರ್ಬೀಕರ್ ಸೇರಿದಂತೆ ಹಲವು ಐಪಿಎಸ್ ಅಧಿಕಾರಿಗಳನ್ನು ವಿವಿಧ ಹುದ್ದೆಗಳಿಗೆ ವರ್ಗಾವಣೆ ಮಾಡಲಾಗಿದೆ.
ನಿಕಟಪೂರ್ವ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಂಗಳೂರು ವಲಯ ಐಜಿಪಿಯಾಗಿ ನಿಯುಕ್ತಿ ಗೊಂಡಿದ್ದಾರೆ.



