*ಮನೆ, ಕಚೇರಿ, ಸಂಬಂಧಿಗಳ ಮನೆ ಸೇರಿ ಆರು ಕಡೆ ಏಕಕಾಲಕ್ಕೆ ದಾಳಿ, ಎಸ್ಪಿ ಹಣಮಂತರಾಯ, ಡಿವೈಎಸ್ಪಿ ಬಿರಾದಾರ ನೇತೃತ್ವದಲ್ಲಿ ಕಾರ್ಯಾಚರಣೆ*
ಗದಗ : ರಾಜ್ಯದ ಹಲವೆಡೆ ಭ್ರಷ್ಟ ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಶಾಕ್ ಎದುರಾಗಿದ್ದು, ಗದಗ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಗಂಗಾಧರ್ ಶಿರೋಳ ಮನೆ, ಕಚೇರಿ ಸೇರಿ 6 ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಗಂಗಾಧರ್ ಅವರ ಮನೆ, ಕಚೇರಿ, ಅಳಿಯ, ಭಾವನ ಮನೆ ಸೇರಿ 6 ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಎಸ್ ಪಿ ಹಣಮಂತರಾಯ ಹಾಗೂ ಡಿವೈಎಸ್ ಪಿ ವಿಜಯ ಬಿರಾದಾರ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಶಿರೋಳ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪಗಳ ಹಿನ್ನೆಲೆಯಲ್ಲಿ ಈ ದಾಳಿ ನಡೆಯುತ್ತಿದೆ.
ಇಂದು ಬೆಳಿಗ್ಗೆ ಗಂಗಾಧರ ಶಿರೋಳ ಅವರ ಗದಗ ನಗರದ ಹುಡ್ಕೋ ಕಾಲೋನಿಯಲ್ಲಿ ಇರುವ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಇದಲ್ಲದೆ, ಗಂಗಾಧರ ಶಿರೋಳ ಅವರ ಕಚೇರಿ ಹಾಗೂ ಅವರ ಅಳಿಯ ವಿಜಯ ಯಳಮೇಲಿ ಮತ್ತು ಭಾವ ನಾಗರಾಜ್ ಅಕ್ಕಿಯವರ ನಿವಾಸಗಳ ಮೇಲೂ ದಾಳಿ ನಡೆದಿದೆ.
ಅಲ್ಲದೆ, ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿಯ ಶೆಟ್ಟರ್ ಹಾಗೂ ಹಾವೇರಿ ಜಿಲ್ಲೆಯಲ್ಲಿರುವ ಸಂಬಂಧಿಕರ ಮನೆಗಳ ಮೇಲೂ ಲೋಕಾಯುಕ್ತ ತಂಡ ದಾಳಿ ನಡೆಸಿದ್ದು, ಈ ಮೂಲಕ ಒಟ್ಟು ಆರು ಕಡೆಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.
ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಕಾರ್ಯಾಚರಣೆ ಮುಂದುವರಿದಿದ್ದು ಶಿರೋಳರ ಆಸ್ತಿಗಳ ದಾಖಲೆಗಳು, ಬ್ಯಾಂಕ್ ಖಾತೆಗಳ ವಿವರಗಳು, ಭೂಸ್ವತ್ತು ದಾಖಲೆಗಳು ಮತ್ತು ಬೆಲೆಬಾಳುವ ವಸ್ತುಗಳ ಬಗ್ಗೆ ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ. ಶಿರೋಳ ಅಧಿಕೃತ ಆದಾಯಕ್ಕಿಂತ ಭಾರಿ ಪ್ರಮಾಣದಲ್ಲಿ ಹೆಚ್ಚಿನ ಆಸ್ತಿಯನ್ನು ಹೊಂದಿರುವರೆನ್ನಲಾಗಿದೆ.